ಅಮರಾವತಿ: ತಿರುಪತಿ ಲಾಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪದ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ಸ್ವತಂತ್ರ ಎಸ್‌ಐಟಿ ರಚಿಸಿದೆ.
ಕೇಂದ್ರೀಯ ಸಂಸ್ಥೆಯ ಇಬ್ಬರು, ಆಂಧ್ರ ಪ್ರದೇಶ ಪೊಲೀಸ್ ಇಲಾಖೆಯ ಇಬ್ಬರು ಮತ್ತು ಎಫ್‌ಎಸ್‌ಎಸ್‌ಎಐನಿಂದ ಒಬ್ಬರು ಸೇರಿ ಐವರು ಅಧಿಕಾರಿಗಳನ್ನು ಎಸ್‌ಐಟಿ ತಂಡವು ಒಳಗೊಂಡಿದೆ.
ಸಿಬಿಐ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲಿರುವ ಎಸ್‌ಐಟಿ ತಂಡಕ್ಕೆ ರಾಜ್ಯ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿಗಳಾದ ಸರ್ವಶ್ರೇಷ್ಠ ತ್ರಿಪಾಠಿ ಮತ್ತು ಗೋಪಿನಾಥ್ ಜೆಟ್ಟಿ ಅವರ ಹೆಸರುಗಳನ್ನು ನೀಡಿದೆ ಎಂದು ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಸಿ.ಎಚ್. ದ್ವಾರಕಾ ತಿರುಮಲ ರಾವ್ ಹೇಳಿದ್ದಾರೆ.
‘ನಾವು ಹೆಸರುಗಳನ್ನು ಕಳುಹಿಸಿದ ನಂತರ, ಸಿಬಿಐ ನಿರ್ದೇಶಕರು ಐದು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದುಕೊಂಡು, ತ್ರಿಪಾಠಿ ಮತ್ತು ಗೋಪಿನಾಥ್ ಜೆಟ್ಟಿ ಹೆಸರನ್ನು ಎಸ್ಐಟಿಗೆ ಸೇರಿಸಲು ಸಿಬಿಐಗೆ ಕಳುಹಿಸಿದ್ದೇವೆ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ತ್ರಿಪಾಠಿ ಮತ್ತು ಗೋಪಿನಾಥ್ ಜೆಟ್ಟಿ ಅವರು, ರಾಜ್ಯ ಸರ್ಕಾರವು ಲಾಡು ಕಲಬೆರೆಕೆ ಆರೋಪಗಳನ್ನು ಪರಿಶೀಲಿಸಲು ಈ ಹಿಂದೆ ರಚಿಸಿದ್ದ ಎಸ್‌ಐಟಿಯ ಭಾಗವಾಗಿದ್ದರು. ಆದರೆ, ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಈ ಸಮಿತಿ ನಿಷ್ಕ್ರಿಯಗೊಂಡಿತ್ತು.
ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಆಧರಿಸಿ ಎಸ್‌ಐಟಿ ತನಿಖೆ ಆರಂಭಿಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.