ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಆರ್.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರಿಗೆ ಆಪ್ತರಾಗಿದ್ದ ವೈದ್ಯರೊಬ್ಬರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಡಾ. ಬಿಸ್ವಾಸ್ ಅವರನ್ನು ವಿಚಾರಣೆ ನಡೆಸಿದ್ದ ಅಧಿಕಾರಿಗಳು, ನಿಯಮಗಳನ್ನು ಉಲ್ಲಂಘಿಸಿ ಸೂರ್ಯಾಸ್ತದ ಬಳಿಕ ಏಕೆ ಮೃತ ವಿದ್ಯಾರ್ಥಿನಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಪ್ರಶ್ನಿಸಿದ್ದರು.
ವಿದ್ಯಾರ್ಥಿನಿಯ ಶವ ಪತ್ತೆಯಾದ ಸೆಮಿನಾರ್ ಹಾಲ್‌ನಿಂದ ಸಾಕ್ಷಿಗಳನ್ನು ತರಾತುರಿಯಲ್ಲಿ ಸಂಗ್ರಹಿಸಿರುವ ಹಿಂದಿನ ಕಾರಣವೆಂದೂ ಪ್ರಶ್ನಿಸಲಾಯಿತು. ಅವರ ನೀಡಿದ ಹೇಳಿಕೆಗಳನ್ನು ದಾಖಲಿಸಲಾಗಿದೆ. ತನಿಖೆ ಭಾಗವಾಗಿ ಮತ್ತೆ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣದ ಅವ್ಯವಹಾರ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಆಸ್ಪತ್ರೆಯ ಮಾಜಿ ವೈದ್ಯಕೀಯ ಅಧೀಕ್ಷಕ ಮತ್ತು ಉಪ ಪ್ರಾಂಶುಪಾಲರಾದ (ಎಂಎಸ್‌ವಿಪಿ) ಡಾ.ಸಂಜಯ್ ವಸಿಷ್ಠ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಿತ್ತು.
ಆರ್.ಜಿ. ಕರ್ ಆಸ್ಪತ್ರೆಯ ಪ್ರಸ್ತುತ ಎಂಎಸ್‌ವಿಪಿ ಸಪ್ತರ್ಷಿ ಚಟರ್ಜಿ ಅವರು ಸಂಸ್ಥೆಗೆ ಸಂಬಂಧಿಸಿದ ಹಣಕಾಸಿನ ಕೆಲವು ದಾಖಲೆಗಳನ್ನು ಸಲ್ಲಿಸಲು ಸಿಬಿಐ ಕಚೇರಿಗೆ ಮಂಗಳವಾರ ಭೇಟಿ ನೀಡಿದರು.
ಕೋಲ್ಕತ್ತ ಹೈಕೋರ್ಟ್‌ನ ಪ್ರತ್ಯೇಕ ಆದೇಶದ ಮೇರೆಗೆ ಅತ್ಯಾಚಾರ-ಕೊಲೆ ಪ್ರಕರಣ ಮತ್ತು ಹಣಕಾಸಿನ ಅವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.