ನವದೆಹಲಿ: ತನಿಖೆಯ ಹೆಸರಿನಲ್ಲಿ ಸುಲಿಗೆ ನಡೆಸಲಾಗಿದೆ ಎಂಬ ಸಿಬಿಐ ಆರೋಪದ ನಡುವೆಯೇ ಅದರ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಮತ್ತು ಡಿಎಸ್‌ಪಿ ದೇವೇಂದರ್ ಕುಮಾರ್ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಆರೋಪದ ಎಫ್‌ಐಆರ್ ರದ್ದು ಮಾಡುವಂತೆ ಕೋರಿದ್ದಾರೆ.
ಈಗ ನಡೆಯುತ್ತಿರುವ ತನಿಖೆಗೆ ಹೈಕೋರ್ಟ್ ತಡೆ ಕೊಟ್ಟಿಲ್ಲ. ಆದರೆ, ಅಸ್ತಾನಾ ವಿರುದ್ಧ ಆರಂಭಿಸಲಾಗಿರುವ ಕ್ರಿಮಿನಲ್ ಪ್ರಕ್ರಿಯೆಗಳನ್ನು ಸೋಮವಾರದವರೆಗೆ ಯಥಾಸ್ಥಿತಿಯಲ್ಲಿ ಉಳಿಸುವಂತೆ ಸೂಚಿಸಿದೆ. ದೇವೇಂದರ್ ಕುಮಾರ್ ಅವರನ್ನು ಸ್ಥಳೀಯ ನ್ಯಾಯಾಲಯವೊಂದು ಏಳು ದಿನಗಳಿಗೆ ಸಿಬಿಐ ವಶಕ್ಕೆ ಕೊಟ್ಟಿದೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಜತೆಗೆ ಸಂಸ್ಥೆಯ ಎರಡನೇ ಅತ್ಯಂತ ಹಿರಿಯ ಅಧಿಕಾರಿ ಅಸ್ತಾನಾ ಅವರು ಸಂಘರ್ಷಕ್ಕೆ ಇಳಿದಿದ್ದಾರೆ. ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಅಸ್ತಾನಾ ಕೋರಿದ್ದಾರೆ. ಸೋಮವಾರ ಬಂಧನಕ್ಕೆ ಒಳಗಾದ ದೇವೇಂದರ್ ಅವರು ಬಂಧನವನ್ನು ಪ್ರಶ್ನಿಸಿ ಸ್ಥಳೀಯ ನ್ಯಾಯಾಲಯವೊಂದರಲ್ಲಿ ಮನವಿ ಸಲ್ಲಿಸಿದ್ದಾರೆ.
ಕೋರ್ಟ್ ಹೇಳಿದ್ದೇನು
* ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ, ಜಂಟಿ ನಿರ್ದೇಶಕ ಎ.ಕೆ. ಶರ್ಮಾ, ಸಿಬಿಐ ಮತ್ತು ಸಿಬಿಐಯ ನಿರ್ವಹಣೆ ಹೊಣೆ ಹೊತ್ತ ಸಿಬ್ಬಂದಿ ಸಚಿವಾಲಯವುಪ್ರತಿಕ್ರಿಯೆ ದಾಖಲಿಸಬೇಕು
*ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಮೊಬೈಲ್ ಕರೆ ದಾಖಲೆಗಳನ್ನು ಅಸ್ತಾನಾ ಮತ್ತು ಅಲೋಕ್ ಅವರು ರಕ್ಷಿಸಿ ಇರಿಸಿಕೊಳ್ಳಬೇಕು
ಪ್ರಕರಣ ಏನು?
ಇದೇ 15ರಂದು ಅಸ್ತಾನಾ ವಿರುದ್ಧ ಲಂಚ ಪಡೆದ ಆರೋಪದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಮಾಂಸ ರಫ್ತು ಉದ್ಯಮಿ ಮೊಯಿನ್ ಖುರೇಷಿ ವಿರುದ್ಧದ ಅಕ್ರಮ ವ್ಯವಹಾರದ ಪ್ರಕರಣವನ್ನು ದುರ್ಬಲಗೊಳಿಸಲು ಅಸ್ತಾನಾ ಅವರು ₹2 ಕೋಟಿ ಲಂಚ ಪಡೆದಿದ್ದಾರೆ ಎಂದು ಉದ್ಯಮಿ ಸತೀಶ್ ಸನಾ ಆರೋಪಿಸಿದ್ದಾರೆ. ಮೊಯಿನ್ ಖುರೇಷಿ ಪ್ರಕರಣದಲ್ಲಿ ದೇವೇಂದರ್ ಅವರು ತನಿಖಾಧಿಕಾರಿಯಾಗಿದ್ದರು.
ಸಿಬಿಐ ವಾದ
* ಅಸ್ತಾನಾ ವಿರುದ್ಧದ ಆರೋಪಗಳು ಗಂಭೀರವಾಗಿದ್ದು ತನಿಖೆ ನಡೆಯುತ್ತಿದೆ. ಅವರ ವಿರುದ್ಧ ಇನ್ನಷ್ಟು ಆರೋಪಗಳನ್ನು ಎಫ್‌ಐಆರ್‌ಗೆ ಸೇರಿಸಲಾಗುವುದು
* ತನಿಖೆ ಹೆಸರಿನಲ್ಲಿ ಸುಲಿಗೆ ನಡೆಸುತ್ತಿರುವ ಭಾರಿ ಜಾಲವೇ ಕೆಲಸ ಮಾಡುತ್ತಿದೆ. ದೇವೇಂದರ್ ಅವರ ಕಚೇರಿಯಲ್ಲಿ ಶೋಧ ನಡೆಸಿದಾಗ ಇದಕ್ಕೆ ಪೂರಕವಾದ ದಾಖಲೆಗಳು ಸಿಕ್ಕಿವೆ
ಅಸ್ತಾನಾ ವಾದ
* ದಾಖಲಾಗಿರುವ ಎಫ್‌ಐಆರ್ ಕಾನೂನುಬಾಹಿರ. ಆರೋಪಿಯ ಹೇಳಿಕೆಯ ಆಧಾರದಲ್ಲಿ ಈ ಎಫ್‌ಐಆರ್ ದಾಖಲಿಸಲಾಗಿದೆ
*ಖುರೇಷಿ ಪ್ರಕರಣದಲ್ಲಿ ಸಿಬಿಐನ ಇಬ್ಬರು ಮಾಜಿ ನಿರ್ದೇಶಕರು ಒಳಗೊಂಡಿದ್ದಾರೆ. ಹಾಗಾಗಿ ಪ್ರಕರಣದ ಹಾದಿ ತಪ್ಪಿಸುವ ಷಡ್ಯಂತ್ರ ನಡೆದಿದೆ. ಮಾಜಿ ನಿರ್ದೇಶಕರಾದ ಎ.ಪಿ. ಸಿಂಗ್ ಮತ್ತು ರಂಜಿತ್ ಸಿನ್ಹಾ ಅವರ ವಿರುದ್ಧವೂ ಸಿಬಿಐ ತನಿಖೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.