ನವದೆಹಲಿ:ಸಿಬಿಐ ಹಂಗಾಮಿ ನಿರ್ದೇಶಕರಾಗಿ ಇತ್ತೀಚೆಗೆ ನೇಮಕಗೊಂಡಿರುವಎಂ.ನಾಗೇಶ್ವರ ರಾವ್ ಅವರ ಪತ್ನಿ ಎಂ.ಸಂಧ್ಯಾ ಕೋಲ್ಕತ್ತ ಮೂಲದ ಕಂಪನಿಯೊಂದಕ್ಕೆ₹1.14 ಕೋಟಿ ನೀಡಿದ್ದ ವಿಚಾರ ಬಯಲಾಗಿದೆ.
2011ರಿಂದ 2014ರ ನಡುವಣ ಅವಧಿಯಲ್ಲಿ ಕೋಲ್ಕತ್ತ ಮೂಲದ ಏಂಜೆಲಾ ಮರ್ಕೆಂಟೈಲ್ಸ್ ಪ್ರೈವೇಟ್ ಲಿ. (ಎಪಿಎಂಎಲ್) ಕಂಪನಿ ಜತೆ ಸಂಧ್ಯಾ ಅವರು ಹಲವು ಬಾರಿ ಹಣಕಾಸು ವ್ಯವಹಾರ ನಡೆಸಿದ್ದಾರೆ ಎಂದುರಿಜಿಸ್ಟ್ರಾರ್ ಆಫ್ ಕಂಪನೀಸ್ ಮಾಹಿತಿ ನೀಡಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ರಿಜಿಸ್ಟ್ರಾರ್ ಆಫ್ ಕಂಪನೀಸ್ ದಾಖಲೆಗಳ ಪ್ರಕಾರ, 2011ರ ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಸಂಧ್ಯಾ ಅವರು ಎಪಿಎಂಎಲ್‌ನಿಂದ ₹25 ಲಕ್ಷ ಪಡೆದುಕೊಂಡಿದ್ದಾರೆ. 2012 ಮತ್ತು 2014ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಸಂಧ್ಯಾ ಅವರು ಎಪಿಎಂಎಲ್‌ಗೆ ಮೂರು ಕಂತಿನಲ್ಲಿ ಒಟ್ಟು ₹1.14 ಕೋಟಿ ನೀಡಿದ್ದಾರೆ. 12ನೇ ಹಣಕಾಸು ವರ್ಷದಲ್ಲಿ ₹35.56 ಲಕ್ಷ, 13ನೇ ಹಣಕಾಸು ವರ್ಷದಲ್ಲಿ 38.27 ಲಕ್ಷ ಮತ್ತು 14ನೇ ಹಣಕಾಸು ವರ್ಷದಲ್ಲಿ ₹40.29 ಲಕ್ಷ ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೋಲ್ಕತ್ತ ಮೂಲದ ಪ್ರವೀಣ್ ಅಗರ್‌ವಾಲ್ ಎಂಬುವವರು ಎಪಿಎಂಎಲ್ ನಿರ್ದೇಶಕರು ಎಂಬುದಾಗಿ ರಿಜಿಸ್ಟ್ರಾರ್ ಆಫ್ ಕಂಪನೀಸ್‌ನಲ್ಲಿ ಉಲ್ಲೇಖವಾಗಿದೆ. ಸಂದ್ಯಾ ಹಣ ನೀಡಿರುವ ಬಗ್ಗೆ ದೂರವಾಣಿ ಮೂಲಕ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿರುವಪ್ರವೀಣ್ ಅಗರ್‌ವಾಲ್, ‘ಅವರು (ಸಂಧ್ಯಾ) ದೀರ್ಘ ಕಾಲದಿಂದ ನಮ್ಮ ಕುಟುಂಬ ಸ್ನೇಹಿತನ (ರಾವ್) ಪತ್ನಿ. ಆತ ಒಡಿಶಾದಲ್ಲಿ ಅಧಿಕಾರಿಯಾಗಿದ್ದಾಗಿನಿಂದ ನಮ್ಮ ಸ್ನೇಹಿತ. ಅವರು ನಮ್ಮ ಕುಟುಂಬದಂತೆ. ನಮ್ಮ ಕುಟುಂಬ ಸ್ನೇಹಿತರೆಂದು ಪರಿಗಣಿಸಿದವರಿಂದ ಸಾಲ ಅಥವಾ ಹೂಡಿಕೆ ಪಡೆದುಕೊಳ್ಳುವುದರಲ್ಲಿ ತಪ್ಪೇನು’ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಲು ಸಿಬಿಐ ವಕ್ತಾರರು ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
ನಾಗೇಶ್ವರ ರಾವ್ಒಡಿಶಾ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ.ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರನ್ನು ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ನಿರ್ಬಂಧಿತ ರಜೆಯಲ್ಲಿ ತೆರಳುವಂತೆ ಇತ್ತೀಚೆಗೆ ಆದೇಶ ಹೊರಡಿಸಲಾಗಿತ್ತು. ನಂತರ ರಾವ್ ಅವರನ್ನುಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು.
ಇದನ್ನೂ ಓದಿ:ಅಧಿಕಾರಿಗಳ ಕಿತ್ತಾಟ: ಸಿಬಿಐ ಘನತೆಗೆ ಕುತ್ತು
ರಾವ್ ಅವರು2008ರಿಂದ 2011ರ ವರೆಗೆ ಸಿಆರ್‌ಪಿಎಫ್‌ನಲ್ಲಿ ಕಾರ್ಯನಿರ್ವಹಿಸಿದ್ದರು. 2012ರಲ್ಲಿ ಒಡಿಶಾಗೆ ಮರಳಿದ್ದರು. 2016ರ ಏಪ್ರಿಲ್‌ನಲ್ಲಿ ಸಿಬಿಐ ಜಂಟಿ ನಿರ್ದೇಶಕರಾಗಿ ನೇಮಕಗೊಂಡಿದ್ದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.