ADVERTISEMENT

ಕೇರಳದ ಜೈಹಿಂದ್‌ ಚಾನಲ್‌ನಲ್ಲಿ ಡಿಕೆಶಿ ಅವರ ಹೂಡಿಕೆ ವಿವರ ಕೊಡಿ ಎಂದ ಸಿಬಿಐ

‘ಜೈಹಿಂದ್‌’ ಚಾನಲ್‌ಗೆ ಸಿಬಿಐ ನೋಟಿಸ್‌ ಜಾರಿ

ಪಿಟಿಐ
Published 31 ಡಿಸೆಂಬರ್ 2023, 13:18 IST
Last Updated 31 ಡಿಸೆಂಬರ್ 2023, 13:18 IST
ಡಿಕೆಶಿ
ಡಿಕೆಶಿ   

ನವದೆಹಲಿ: ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾನಲ್‌ನಲ್ಲಿ ಮಾಡಿರುವ ಹೂಡಿಕೆಗಳ ವಿವರ ಒದಗಿಸಲು ಸೂಚಿಸಿ ಕೇರಳ ಮೂಲದ ‘ಜೈಹಿಂದ್‌’ ಚಾನಲ್‌ಗೆ ಸಿಬಿಐ ನೋಟಿಸ್‌ ಜಾರಿ ಮಾಡಿದೆ.

ಆದಾಯ ಮೀರಿದ ಆಸ್ತಿಗೆ ಸಂಬಂಧಿತ ಪ್ರಕರಣದಲ್ಲಿ ನೋಟಿಸ್‌ ಜಾರಿಯಾಗಿದೆ. ಜ 11ರಂದು ವಿಚಾರಣೆಗೆ ಹಾಜರಾಗಿ ಎಂದು ಜೈಹಿಂದ್‌ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ.

ಅಪರಾಧ ದಂಡ ಸಂಹಿತೆ ಸೆಕ್ಷನ್‌ 91ರ ಅನ್ವಯ ನೋಟಿಸ್‌ ನೀಡಿದೆ, ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಅವರು ಚಾನಲ್‌ನಲ್ಲಿ ಮಾಡಿರುವ ಹೂಡಿಕೆ, ಪ್ರತಿಯಾಗಿ ಪಡೆದಿರುವ ಲಾಭಾಂಶ, ಷೇರು ವಹಿವಾಟು, ಹೊಂದಿರುವ ಆಸ್ತಿಯ ವಿವರಗಳು, ಸಂಪರ್ಕದಲ್ಲಿದ್ದವರ ವಿವರಗಳನ್ನು ನೀಡಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚನೆ ನೀಡುವ ಅಧಿಕಾರವನ್ನು ತನಿಖಾಧಿಕಾರಿಗೆ ಸೆಕ್ಷನ್ 91 ನೀಡುತ್ತದೆ.

‘ಸಿಬಿಐನ ನೋಟಿಸ್‌ ತಲುಪಿದೆ. ಅದು ಬಯಸಿರುವ ಎಲ್ಲ ವಿವರಗಳನ್ನು ಒದಗಿಸಲಾಗುವುದು. ಎಲ್ಲ ದಾಖಲೆಗಳು ಇವೆ. ಯಾವುದೇ ಕಾನೂನುಬಾಹಿರ ವಹಿವಾಟುಗಳಿಲ್ಲ’ ಎಂದು ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌.ಶಿಜು ಈ ಬಗ್ಗೆ ಪ್ರತಿಕ್ರಿಯಿಸಿದರು. ‘ಇದು ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಸಿಬಿಐ ಕಾರ್ಯವೈಖರಿಗೆ ಸ್ಪಷ್ಟ ನಿದರ್ಶನ’ ಎಂದು ಟೀಕಿಸಿದರು.

ಕೇರಳದ ಕಾಂಗ್ರೆಸ್ ಮುಖಂಡರೂ ಆದ ಶಿಜು, ಕರ್ನಾಟಕದ ಹಿಂದಿನ ಬಿಜೆಪಿ ಸರ್ಕಾರವೂ ತನಿಖೆ ನಡೆಸಿತ್ತು. ಅಕ್ರಮ ನಡೆದಿಲ್ಲದ ಕಾರಣ ತನಿಖೆಯನ್ನು ಅಂತಿಮಗೊಳಿಸಲಾಗಿತ್ತು ಎಂದು ಹೇಳಿದರು. ಈಗ, ಮತ್ತೆ ತನಿಖೆಯನ್ನು ಆರಂಭಿಸುವುದರ ಉದ್ದೇಶ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ‘ಕಿರುಕುಳ’ ನೀಡುವುದೇ ಆಗಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ವಿರುದ್ಧ 2020ರಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. 2013– 2018ರ ನಡುವೆ ₹ 74 ಕೋಟಿ ಮೊತ್ತದ ಆಸ್ತಿ ಗಳಿಸಿದ್ದು, ಇದು ನಿಗದಿತ ಮೂಲದ ಆದಾಯವನ್ನು ಮೀರಿದ್ದಾಗಿದೆ ಎಂದು ಸಿಬಿಐ ಪ್ರತಿಪಾದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.