ಹೈದರಾಬಾದ್: ದೆಹಲಿ ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆತೆಲಂಗಾಣಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರಿಗೆ ಸಿಬಿಐ ಶುಕ್ರವಾರ ತಡರಾತ್ರಿ ನೋಟಿಸ್ ಜಾರಿ ಮಾಡಿದೆ.
2021-22ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 14 ಜನರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಕವಿತಾ ಅವರನ್ನು ಪ್ರಶ್ನಿಸುವ ಅಗತ್ಯವಿದೆ ಎಂದು ಡಿಸೆಂಬರ್ 2 ರಂದು ಹೊರಡಿಸಲಾಗಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಅಪರಾಧ ದಂಡ ಸಂಹಿತೆಯ ಸೆಕ್ಷನ್ 160 ಅಡಿಯಲ್ಲಿ ನೀಡಲಾಗಿರುವ ನೋಟಿಸ್‌ನಲ್ಲಿ, 'ಪ್ರಕರಣದ ತನಿಖೆಯ ವೇಳೆ, ನಿಮಗೆ ಸಂಬಂಧಿಸಿದ ಕೆಲವು ಸಂಗತಿಗಳು ಬೆಳಕಿಗೆ ಬಂದಿವೆ. ಹಾಗಾಗಿ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಲುವಾಗಿ ನಿಮ್ಮನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ' ಎಂದು ಉಲ್ಲೇಖಿಸಲಾಗಿದೆ.
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಉದ್ಯಮಿ ಅಮಿತ್ ಅರೋರ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆ ವೇಳೆ ಕವಿತಾ ಅವರ ಹೆಸರನ್ನು ಹೇಳಿದ್ದರು. ಹೀಗಾಗಿ, ಇ.ಡಿ ಅರೋರಾ ಅವರ ರಿಮಾಂಡ್ ವರದಿಯಲ್ಲಿ ಕವಿತಾ ಹೆಸರನ್ನು ಉಲ್ಲೇಖಿಸಿತ್ತು. ಅದರಂತೆ ಸಿಬಿಐ ನೋಟಿಸ್ ನೀಡಿದೆ.
ಮಾಜಿ ಸಂಸದೆಯೂ ಆಗಿರುವ ಕವಿತಾ ಅವರು, ಇದು ಬಿಜೆಪಿಯವರ ರಾಜಕೀಯ ಷಡ್ಯಂತ್ರ ಎಂದು ಟೀಕಿಸಿದ್ದಾರೆ.
ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಕವಿತಾ ಶಾಮೀಲಾಗಿದ್ದಾರೆ ಎಂದು ಕೇಂದ್ರ ಹಾಗೂ ತೆಲಂಗಾಣದ ಬಿಜೆಪಿ ನಾಯಕರು ನಿರಂತರವಾಗಿ ಆರೋಪ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.