ADVERTISEMENT

ಕೇರಳ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾವು; ಸಿಬಿಐ ತನಿಖೆಗೆ ಕಾಂಗ್ರೆಸ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 16:18 IST
Last Updated 3 ಮಾರ್ಚ್ 2024, 16:18 IST
ವಿ.ಡಿ. ಸತೀಶನ್‌
ವಿ.ಡಿ. ಸತೀಶನ್‌   

ತಿರುವನಂತಪುರ: ರ‍್ಯಾಗಿಂಗ್‌ ಹಾಗೂ ಹಿಂಸೆಯಿಂದಾಗಿ, ವಯನಾಡ್‌ನಲ್ಲಿರುವ ಕೇರಳ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾವನ್ನಪ್ಪಿದ ಎಂಬ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ವಿರೋಧ ಪಕ್ಷ ಕಾಂಗ್ರೆಸ್‌ ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್‌ ನಾಯಕ ವಿ.ಡಿ.ಸತೀಶನ್‌, ‘ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಸಿಪಿಎಂನ ವಿದ್ಯಾರ್ಥಿ ವಿಭಾಗ ಎಸ್‌ಎಫ್‌ಐನ ಸ್ಥಳೀಯ ಮುಖಂಡರನ್ನು ರಕ್ಷಿಸಲು ಪೊಲೀಸರು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿದ್ದಾರೆ.

ವಿ.ವಿ.ಯ ಪಶುವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜೆ.ಎಸ್‌.ಸಿದ್ಧಾರ್ಥ ಎಂಬ ವಿದ್ಯಾರ್ಥಿ ಮೇಲೆ ಭೀಕರ ಹಲ್ಲೆ ನಡೆಸಲಾಗಿತ್ತು ಎನ್ನಲಾಗಿದೆ. ಹಲ್ಲೆ ನಡೆಸುವುದಕ್ಕೆ ಬಳಸಲಾಗಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ಫೆ.18ರಂದು ಹಾಸ್ಟೆಲ್‌ನಲ್ಲಿ ಸಿದ್ಧಾರ್ಥ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ, ತಮ್ಮ ಪುತ್ರನನ್ನು ಕೊಲೆ ಮಾಡಲಾಗಿದೆ ಎಂದು ಪಾಲಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.