ಪಟ್ನಾ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕರ ಮನೆಗಳು ಸೇರಿದಂತೆ ಬಿಹಾರದ ಹಲವೆಡೆ ಬುಧವಾರ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಉದ್ಯೋಗಕ್ಕೆ ಬದಲಾಗಿ ಭೂಮಿ ಹಗರಣಕ್ಕೆ (ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ‘ಡಿ’ ದರ್ಜೆಯ ನೇಮಕಾತಿಗೆ ಪ್ರತಿಯಾಗಿ ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಭೂಮಿ ವರ್ಗಾಯಿಸಿಕೊಂಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದ್ದು) ಸಂಬಂಧಿಸಿದಂತೆ ದಾಳಿ ನಡೆದಿದೆ.
ಆರ್‌ಜೆಡಿ ಎಂಎಲ್‌ಸಿ ಸುನಿಲ್ ಸಿಂಘ್, ಅಶ್ಫಾಕ್ ಕರೀಂ, ಫಯಾಜ್ ಅಹ್ಮದ್ ಹಾಗೂ ಆರ್‌ಜೆಡಿಯ ಮಾಜಿ ಎಂಎಲ್‌ಸಿ ಸುಬೋಧ್ ರಾಯ್ ಅವರ ಪಟ್ನಾದ ನಿವಾಸದ ಮೇಲೆ ದಾಳಿ ನಡೆದಿದೆ.
‘ಉದ್ದೇಶಪೂರ್ವಕವಾಗಿ ಈ ದಾಳಿ ನಡೆಸಲಾಗಿದೆ. ಇದಕ್ಕೆ ಅರ್ಥವಿಲ್ಲ. ಭಯದಿಂದ ಶಾಸಕರು ತಮ್ಮ ಬಳಿ ಬರಬಹುದು ಎಂದು ಭಾವಿಸಿ ಹೀಗೆ ಮಾಡುತ್ತಿದ್ದಾರೆ’ ಎಂದು ಸುನಿಲ್ ಸಿಂಘ್ ಆರೋಪಿಸಿದ್ದಾರೆ.
‘ಇವುಗಳನ್ನೆಲ್ಲ ಇ.ಡಿ, ಐಟಿ ಅಥವಾ ಸಿಬಿಐ ದಾಳಿ ಎಂದು ಹೇಳುವುದು ವ್ಯರ್ಥ. ಈ ಸಂಸ್ಥೆಗಳೆಲ್ಲ ಈಗ ಬಿಜೆಪಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳೆಲ್ಲ ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಇದು ಬಿಜೆಪಿಯ ದಾಳಿ. ಇಂದು ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಈ ದಾಳಿಯ ಹಿಂದಿನ ಮರ್ಮವನ್ನು ಊಹಿಸಬಹುದು’ ಎಂದು ಆರ್‌ಜೆಡಿ ರಾಜ್ಯಸಭಾ ಸದಸ್ಯ ಮನೋಜ್ ಝಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.