ನವದೆಹಲಿ: ಕಾಸಿಗಾಗಿ ಪ್ರಶ್ನೆ ಪ್ರಕರಣ ಸಂಬಂಧ ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಲೋಕಪಾಲ್ ನಿರ್ದೇಶನದಂತೆ ಸಿಬಿಐ ಈ ಕ್ರಮ ತೆಗೆದುಕೊಂಡಿದೆ.
ಪ್ರಕರಣ ಸಂಬಂಧ ಸಿಬಿಐನ ಪ್ರಾಥಮಿಕ ತನಿಖೆಯ ಮಾಹಿತಿ ಪಡೆದುಕೊಂಡ ಬಳಿಕ, ಎಫ್‌ಐಆರ್ ದಾಖಲು ಮಾಡಿ ಎಂದು ಸಿಬಿಐಗೆ ಲೋಕಪಾಲ್ ನಿರ್ದೇಶನ ನೀಡಿತ್ತು.
ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ, ಆರು ತಿಂಗಳೊಳಗೆ ವರದಿ ನೀಡಬೇಕು ಎಂದೂ ಲೋಕಪಾಲ್ ನಿರ್ದೇಶಿಸಿದೆ.
ತನಿಖೆಯ ಪ್ರಗತಿ ಬಗ್ಗೆ ಮಾಸಿಕ ವರದಿಯನ್ನು ಸಿಬಿಐ ಲೋಕಪಾಲ್‌ಗೆ ನೀಡಲಿದೆ.
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅದಾನಿ ವಿರುದ್ಧ ಮಾತನಾಡಲು ಮಹುವಾ ಮೊಯಿತ್ರಾ ಅವರು ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದಾನಿಯಿಂದ ಹಣ ಹಾಗೂ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ್ದ ಸದನದ ನೀತಿ ಸಮಿತಿ, ಮಹುವಾ ಅವರನ್ನು ಉಚ್ಚಾಟಿಸಬೇಕು ಎಂದು ವರದಿ ನೀಡಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು.
ಈ ಲೋಕಸಭೆ ಚುನಾವಣೆಗೆ ಕೃಷ್ಣನಗರ ಕ್ಷೇತ್ರದಿಂದ ಮತ್ತೆ ಮಹುವಾ ಅವರಿಗೆ ಟಿಎಂಸಿ ಟಿಕೆಟ್ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.