ನವದೆಹಲಿ: ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಾಥಮಿಕ ತನಿಖೆ ನಡೆಸಲು ಕೆಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿಕೊಂಡಿದೆ.
ಲೋಕಪಾಲ್ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಹುವಾ ವಿರುದ್ಧ ಲೋಕಪಾಲ್‌ಗೆ ದೂರು ನೀಡಿದ್ದರು. ಅದರಂತೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.
ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪದ ಅಡಿಯಲ್ಲಿ ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಬೇಕು ಎಂದು ಲೋಕಸಭೆಯ ನೀತಿ ಸಮಿತಿಯು ಈಗಾಗಲೇ ಶಿಫಾರಸು ಮಾಡಿದೆ. ಆದರೆ, ಈ ಶಿಫಾರಸು 'ಪೂರ್ವಗ್ರಹಪೀಡಿತ' ಮತ್ತು 'ದೋಷಪೂರಿತ'ವಾಗಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ಕಿಡಿಕಾರಿದ್ದಾರೆ.
'ಮಹುವಾ ಸಮರ್ಥರಿದ್ದಾರೆ'
ತಮ್ಮ ಪಕ್ಷದ ಸಂಸದೆ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ನವೆಂಬರ್ 23ರಂದು) ಮೊದಲ ಬಾರಿ ಪ್ರತಿಕ್ರಿಯಿಸಿದ್ದರು.
'ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಮಹುವಾ ಹೊಂದಿದ್ದಾರೆ. ಅವರನ್ನು ಸಂಸತ್ತಿನಿಂದ ಹೊರಹಾಕುವುದು ಬಿಜೆಪಿಯ ಉದ್ದೇಶವಾಗಿದೆ. ಅದಕ್ಕಾಗಿ ಆ ಪಕ್ಷ ಮಾಡುತ್ತಿರುವ ಪ್ರಯತ್ನವು ಮಹುವಾಗೆ ಇನ್ನಷ್ಟು ಜನಪ್ರಿಯತೆ ತಂದುಕೊಡಲಿದೆ. ಮಹುವಾ ಈ ಹಿಂದೆ ಸಂಸತ್ತಿನ ಒಳಗೆ ಏನು ಮಾತನಾಡಿದ್ದಾರೋ.. ಅದನ್ನು ಇನ್ನುಮುಂದೆ ಹೊರಗೂ ಮಾತನಾಡಲಿದ್ದಾರೆ. ಆಕೆಯನ್ನು ಶಿಕ್ಷಿಸುವ ಮೂಲಕ ಬಿಜೆಪಿಯು ಗುರುತರವಾದ ಪ್ರಮಾದವೆಸಗಿದೆ' ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.