ADVERTISEMENT

CBI ಪಂಜರದ ಗಿಳಿಯಾಗಿರಬಾರದು, ನಿಷ್ಪಕ್ಷವಾಗಿರಬೇಕು: ಸುಪ್ರೀಂ ಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2024, 11:25 IST
Last Updated 13 ಸೆಪ್ಟೆಂಬರ್ 2024, 11:25 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಸಿಬಿಐ ಪಂಜರದ ಗಿಳಿಯಾಗಿರಬಾರದು. ‘ಪಂಜರದ ಗಿಳಿ’ ಎಂದು ಜನಸಾಮಾನ್ಯರಲ್ಲಿ ಸೃಷ್ಟಿಯಾಗಿರುವ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ವರ್ತಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿಬಿಐ ರಾಜಕೀಯ ಒತ್ತಡದಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಆರೋಪನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಉಜ್ಜಲ್ ಭುಯನ್ ಹೀಗೆ ನುಡಿದಿದ್ದಾರೆ.

‘ಸಿಬಿಐ ನಿಷ್ಪಕ್ಷ‍ಪಾತವಾಗಿ ನಡೆದುಕೊಳ್ಳಬೇಕು. ತಪ್ಪಾದ ನೋಟದಿಂದಲೂ ದೂರವಿರಬೇಕು’ ಎಂದು ಹೇಳಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ತನ್ನನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತೀರ್ಪು ಪ್ರಕಟಿಸುವ ವೇಳೆ ನ್ಯಾಯಮೂರ್ತಿ ಭುಯನ್ ಈ ಅಭಿಪ್ರಾಯಗಳನ್ನು ದಾಖಲಿಸಿದರು.

ADVERTISEMENT

‘ಬಂಧನ ಪ‍್ರಕ್ರಿಯೆಯು ತೊಂದರೆ ಕೊಡುವಂತಿರಬಾರದು. ಈ ಪ್ರಕರಣದಲ್ಲಿ ಸಿಬಿಐನ ನಡವಳಿಕೆ ಸರಿಯಾದ ಕ್ರಮವಲ್ಲ’ ಎಂದೂ ಅವರು ಅಭಿಪ್ರಾಯಪಟ್ಟರು.

‘ಬಂಧನ ಪ್ರಕ್ರಿಯೆಯು ಗೌರವಯುತವಾಗಿರಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರ ಅಭಿಪ್ರಾಯ ಮುಖ್ಯವಾಗಿರುತ್ತದೆ. ತನ್ನ ಸ್ವಾತಂತ್ರ್ಯ ಹಾಗೂ ನಿಷ್ಠೆಯು ತನಿಖಾ ಸಂಸ್ಥೆಯ ಕೆಲಸದಲ್ಲಿ ಪ್ರತಿಫಲಿಸಬೇಕು’ ಎಂದು ಹೇಳಿದ್ದಾರೆ.

ಈ ಹಿಂದೆ ಸಿಬಿಐ ಅನ್ನು ಪಂಜರದ ಗಿಳಿಗೆ ಹೋಲಿಸಿ ಈ ನ್ಯಾಯಾಲಯವು ದೂಷಿಸಿದೆ. ತಾನು ಪಂಜರದ ಗಿಳಿ ಎಂಬ ಕಲ್ಪನೆಯನ್ನು ಹೋಗಲಾಡಿಸುವುದು ಸಿಬಿಐಗೆ ಅನಿವಾರ್ಯವಾಗಿದೆ. ಸಿಬಿಐ ಪಂಜರವಿಲ್ಲದ ಗಿಳಿಯಾಗಿರಬೇಕು’ ಎಂದು ಕಿವಿಹಿಂಡಿದರು.

ಪ್ರಕರಣದದಲ್ಲಿ ತಮ್ಮನ್ನು ಬಂಧಿಸಿದ ಸಿಬಿಐ ಕ್ರಮ ಪ್ರಶ್ನಿಸಿ ಹಾಗೂ ಜಾಮೀನು ಕೋರಿ ಕೇಜ್ರಿವಾಲ್ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಸೆಪ್ಟೆಂಬರ್‌ 5ರಂದು ವಿಚಾರಣೆ ಪೂರ್ಣಗೊಳಿಸಿದ್ದ ಸು‍ಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ಪ್ರಕಟಿಸಿತು.

ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಉಜ್ಜಲ್ ಭುಯನ್ ಅವರಿದ್ದ ನ್ಯಾಯ ಪೀಠ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿತು. ಆದರೆ ಸಿಬಿಐ ಕ್ರಮದ ಬಗ್ಗೆ ಪ್ರಶ್ನಿಸಿದ ಅರ್ಜಿಗೆ ಉಭಯ ನ್ಯಾಯಮೂರ್ತಿಗಳಿಂದ ಭಿನ್ನ ತೀರ್ಪು ಬಂತು.

ಕೇಜ್ರಿವಾಲ್ ಬಂಧನ ಕ್ರಮ ಕಾನೂನುಬದ್ಧವಾಗಿದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ ಅಭಿಪ್ರಾಯಪಟ್ಟರೆ, ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಿದ ಸಿಬಿಐನ ಕ್ರಮವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು.

(ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.