ನವದೆಹಲಿ: ಯುಜಿಸಿ–ನೆಟ್ ಪರೀಕ್ಷಾ ಅಕ್ರಮಗಳ ಬಗ್ಗೆ ಇತ್ತೀಚೆಗಷ್ಟೇ ಪ್ರಕರಣ ದಾಖಲಿಸಿದ್ದ ಸಿಬಿಐ, ‘ನೀಟ್–ಯುಜಿ’ ಪರೀಕ್ಷಾ ಅಕ್ರಮಗಳ ಕುರಿತು ಭಾನುವಾರ ಪ್ರಕರಣ ದಾಖಲು ಮಾಡಿದೆ.
ಈ ಸಂಬಂಧ ಸಿಬಿಐ ವಿಶೇಷ ತಂಡಗಳನ್ನು ರಚಿಸಿದ್ದು, ತನಿಖಾಧಿಕಾರಿ
ಗಳು ಪಟ್ನಾಕ್ಕೆ ತೆರಳಿದ್ದಾರೆ. ಗೋಧ್ರಾಗೂ ಭೇಟಿ ನೀಡಲಿದೆ. ಈ ಎರಡೂ ಕಡೆಗಳಲ್ಲಿನ ಸ್ಥಳೀಯ ಪೊಲೀಸರು ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರಕರಣಗಳನ್ನು ದಾಖಲಿಸಿದ್ದು, ಗೋಧ್ರಾ ಪ್ರಕರಣದ ತನಿಖೆಯನ್ನೂ ಸಿಬಿಐ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಕ್ರಿಮಿನಲ್ ಪಿತೂರಿ, ವಂಚನೆ ಪ್ರಕರಣ ದಾಖಲು: ‘ನೀಟ್’ ಪರೀಕ್ಷಾ ಅಕ್ರಮಗಳ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ ಬಳಿಕ, ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶಕರು ಸಿಬಿಐಗೆ ದೂರು ನೀಡಿದರು. ಅದನ್ನು ಆಧರಿಸಿ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಭಾರತೀಯ ದಂಡ ಸಂಹಿತೆ ಕಲಂ 120–ಬಿ (ಕ್ರಿಮಿನಲ್ ಪಿತೂರಿ) ಮತ್ತು 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 5ರಂದು ವಿದೇಶದ 14 ನಗರಗಳು ಸೇರಿದಂತೆ ದೇಶದ 571 ನಗರಗಳ 4,750 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಕೆಲ ರಾಜ್ಯಗಳಲ್ಲಿ ಪರೀಕ್ಷಾ ಅಕ್ರಮಗಳು ನಡೆದಿರುವ ದೂರುಗಳು ಬಂದಿವೆ ಎಂದು ಶಿಕ್ಷಣ ಸಚಿವಾಲಯ ದೂರಿನಲ್ಲಿ ತಿಳಿಸಿದೆ.
ನೀಟ್–ಪಿಜಿ ಮುಂದೂಡಿಕೆಆಗಿದೆ. ಮೋದಿಯವರ ಆಡಳಿತದಲ್ಲಿ ದೇಶದ ಶಿಕ್ಷಣ ವ್ಯವಸ್ಥೆ ಹಾಳಾಗಿರುವುದಕ್ಕೆ ಮತ್ತೊಂದು ದುರದೃಷ್ಟಕರ ಉದಾಹರಣೆ ಇದುರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಎನ್‌ಟಿಎ ಸ್ವಾಯತ್ತ ಸಂಸ್ಥೆ ಎಂದು ಬಿಂಬಿಸಲಾಗಿದೆ. ಆದರೆ, ವಾಸ್ತವದಲ್ಲಿ ಅದನ್ನು ಬಿಜೆಪಿ/ಆರ್‌ಎಸ್‌ಎಸ್‌ನ ಹಿತಾಸಕ್ತಿಗಳನ್ನು ಜಾರಿಗೊಳಿಸಲು ಬಳಸಲಾಗುತ್ತಿದೆಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಪರೀಕ್ಷೆಗೆ ಒಂದು ದಿನ ಮುನ್ನ ನೀಟ್–ಪಿಜಿ ರದ್ದುಪಡಿಸಲಾಗಿದೆ. ಅದರ ಹೊಣೆ ಮೋದಿ ಮತ್ತು ಸಚಿವರದ್ದು. ಪ್ರಧಾನಿ ಕ್ಷಮೆ ಕೇಳಬೇಕುಅಸಾದುದ್ದೀನ್ ಒವೈಸಿ, ಎಐಎಂಐಎಂ ನಾಯಕ
ಮರು ನೀಟ್: 813 ಮಂದಿ ಹಾಜರು
ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಕೃಪಾಂಕ ನೀಡಿದ್ದ 1,563 ಅಭ್ಯರ್ಥಿಗಳಿಗಾಗಿ ಭಾನುವಾರ ನಡೆದ ಮರು ಪರೀಕ್ಷೆಗೆ 813 ಮಂದಿ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಛತ್ತೀಸಗಢ, ಗುಜರಾತ್, ಹರಿಯಾಣ, ಮೇಘಾಲಯ ಮತ್ತು ಚಂಡೀಗಢದಲ್ಲಿ ಏಳು ಪರೀಕ್ಷಾ ಕೇಂದ್ರಗಳನ್ನು ತೆರೆದಿತ್ತು. 750 ಅಭ್ಯರ್ಥಿಗಳು ಗೈರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.