ADVERTISEMENT

‘ನೀಟ್‌–ಯುಜಿ’ ಅಕ್ರಮ: ಮೂವರು ಅಭ್ಯರ್ಥಿಗಳ ಹೇಳಿಕೆ ದಾಖಲಿಸಿಕೊಂಡ ಸಿಬಿಐ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:45 IST
Last Updated 27 ಜೂನ್ 2024, 16:45 IST
–
   

ಗೋಧ್ರಾ(ಗುಜರಾತ್‌): ‘ನೀಟ್‌–ಯುಜಿ’ಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ನಡೆಸುತ್ತಿರುವ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ, ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತಮಗೆ ನೆರವು ನೀಡುವುದಕ್ಕಾಗಿ ಆರೋಪಿಯೊಬ್ಬನಿಗೆ ಹಣ ನೀಡಿದ ಆರೋಪ ಎದುರಿಸುತ್ತಿರುವ ಮೂವರು ಅಭ್ಯರ್ಥಿಗಳ ಹೇಳಿಕೆಗಳನ್ನು ಗುರುವಾರ ದಾಖಲಿಸಿಕೊಂಡಿದೆ.

ಈ ಮೂವರು ಅಭ್ಯರ್ಥಿಗಳು ಮತ್ತು ಅವರ ಪಾಲಕರನ್ನಲ್ಲದೇ, ಗೋಧ್ರಾದಲ್ಲಿರುವ ಜಯ ಜಲರಾಮ್‌ ಸ್ಕೂಲ್ ಮಾಲೀಕ ದೀಕ್ಷಿತ್ ಪಟೇಲ್‌ ಎಂಬುವವರನ್ನು ಸಹ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೀಕ್ಷಿತ್‌ ಒಡೆತನದ ಈ ಶಾಲೆ ನೀಟ್‌–ಯುಜಿ ಪರೀಕ್ಷಾ ಕೇಂದ್ರವೂ ಆಗಿತ್ತು.

ಪರೀಕ್ಷಾ ಅಕ್ರಮಗಳ ಕುರಿತು ನಡೆಸುತ್ತಿರುವ ತನಿಖೆ ಭಾಗವಾಗಿ, ಸಿಬಿಐ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ಗುಜರಾತ್‌ನಲ್ಲಿ ಠಿಕಾಣಿ ಹೂಡಿದ್ದಾರೆ. ಗುಜರಾತ್‌ನ ಖೇಡಾ ಮತ್ತು ಪಂಚಮಹಲ್‌ ಜಿಲ್ಲೆಗಳಲ್ಲಿರುವ ಎರಡು ಖಾಸಗಿ ಶಾಲೆಗಳಿಗೆ ಸಿಬಿಐ ಅಧಿಕಾರಿಗಳು ಬುಧವಾರ ಭೇಟಿ ನೀಡಿದ್ದರು.

ADVERTISEMENT

ಖೇಡಾ ಜಿಲ್ಲೆಯಲ್ಲಿರುವ ಜಲರಾಮ್ ಇಂಟರ್‌ನ್ಯಾಷನಲ್‌ ಸ್ಕೂಲ್‌ ಹಾಗೂ ಪಂಚಮಹಲ್‌ ಜಿಲ್ಲೆಯ ಗೋಧ್ರಾದಲ್ಲಿರುವ ಜಯ ಜಲರಾಮ್ ಸ್ಕೂಲ್‌ಗಳು ದೀಕ್ಷಿತ್‌ ಪಟೇಲ್‌ ಒಡೆತನದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.