ADVERTISEMENT

ಅಬಕಾರಿ ಹಗರಣ | ಕೇಜ್ರಿವಾಲ್‌ರನ್ನು ಕೋರ್ಟ್‌ಗೆ ಹಾಜರು ಪಡಿಸಲಿರುವ ಸಿಬಿಐ: ಬಂಧನ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜೂನ್ 2024, 2:40 IST
Last Updated 26 ಜೂನ್ 2024, 2:40 IST
<div class="paragraphs"><p>ಅರವಿಂದ ಕೇಜ್ರಿವಾಲ್ </p></div>

ಅರವಿಂದ ಕೇಜ್ರಿವಾಲ್

   

ಪಿಟಿಐ ಚಿತ್ರ

ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟು ತಿಹಾರ್‌ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಇದೇ ಪ್ರಕರಣ ಸಂಬಂಧ ವಿಚಾರಣೆ ನಡೆಸಿರುವ ಸಿಬಿಐ, ಇಂದು (ಬುಧವಾರ) ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ADVERTISEMENT

ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಕೆಳನ್ಯಾಯಾಲಯ ನೀಡಿದ ಜಾಮೀನಿಗೆ ತಡೆ ನೀಡಿದ ದೆಹಲಿ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಅವರು ಸಲ್ಲಿಸಿರುವ ಅರ್ಜಿಯೂ ಇಂದೇ ವಿಚಾರಣೆಗೆ ಬರಲಿದೆ.‌

ಪ್ರಕರಣ ಸಂಬಂಧ ಸೋಮವಾರ ಜೈಲಿನಲ್ಲೇ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದ್ದ ಸಿಬಿಐ, ಹೇಳಿಕೆ ದಾಖಲಿಸಿಕೊಂಡಿತ್ತು. ಮಂಗಳವಾರ ಅವರನ್ನು ಹಾಜರುಪಡಿಸಲು ನ್ಯಾಯಾಲಯದಲ್ಲಿ ವಾರಂಟ್ ಸಲ್ಲಿಸಿತ್ತು. ಅದಕ್ಕೆ ನ್ಯಾಯಾಲಯ ಒಪ್ಪಿಗೆ ನೀಡಿದೆ.

ಬುಧವಾರ 10 ಗಂಟೆಗೆ ಕೇಜ್ರಿವಾಲ್ ಅವರನ್ನು ಸಿಬಿಐ ಕೋರ್ಟ್‌ಗೆ ಹಾಜರುಪಡಿಸಲಿದೆ.

ಸದ್ಯ ಅವರು ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ, ಕೋರ್ಟ್‌ನಲ್ಲಿಯೇ ಅವರನ್ನು ಸಿಬಿಐ ಬಂಧಿಸುವ ಸಾಧ್ಯತೆ ಇದೆ. ಹೀಗಾದರೆ, ದೆಹಲಿ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದರೂ, ಕೇಜ್ರಿವಾಲ್ ಅವರು ಜೈಲಿನಿಂದ ಹೊರಗೆ ಬರಲು ಸಾಧ್ಯವಾಗದು.

ಈ ಬೆಳವಣಿಗೆಯನ್ನು ಖಂಡಿಸಿದರುವ ಆಮ್ ಆದ್ಮಿ ಪಕ್ಷವು, ‘ಅರವಿಂದ ಕೇಜ್ರಿವಾಲ್ ವಿರುದ್ಧ ಸಿಬಿಐ ಸುಳ್ಳು ಪ್ರಕರಣ ಹೂಡಲು ಸಂಚು ಮಾಡಿದೆ’ ಎಂದು ಹೇಳಿದೆ.

ಮಾರ್ಚ್ 21 ರಂದು ಇ.ಡಿಯಿಂದ ಬಂಧಿತರಾಗಿದ್ದ ಅರವಿಂದ ಕೇಜ್ರಿವಾಲ್‌ ಅವರಿಗೆ ದೆಹಲಿ ಕೋರ್ಟ್‌ ಜೂನ್ 20ರಂದು ಜಾಮೀನು ಮಂಜೂರು ಮಾಡಿತ್ತು. ಮರುದಿನವೇ ಇದಕ್ಕೆ ತಡೆ ನೀಡಿದ್ದ ದೆಹಲಿ ಹೈಕೋರ್ಟ್‌ ಜೂನ್ 25ಕ್ಕೆ ಆದೇಶ ಕಾಯ್ದಿರಿಸಿತ್ತು.

ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಕೇಜ್ರಿವಾಲ್, ಜಾಮೀನಿಗೆ ಹೈಕೋರ್ಟ್‌ ನೀಡಿರುವ ತಡೆಯನ್ನು ರದ್ದು ಮಾಡಬೇಕು ಎಂದು ಭಿನ್ನವಿಸಿಕೊಂಡಿದ್ದರು. ‘ಹೈ ಕೋರ್ಟ್ ಆದೇಶದವರೆಗೂ ಕಾದಿರಿ’ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಜೂನ್ 25ರಂದು ಕೆಳ ನ್ಯಾಯಾಲಯ ನೀಡಿದ್ದ ಜಾಮೀನನ್ನು ಹೈಕೋರ್ಟ್‌ ರದ್ದು ಮಾಡಿ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.