ADVERTISEMENT

ಅಲೋಕ್‌ ಪ್ರಕರಣ: ‘ಸುಪ್ರೀಂ’ಗೆ ವರದಿ

ಪಿಟಿಐ
Published 12 ನವೆಂಬರ್ 2018, 19:31 IST
Last Updated 12 ನವೆಂಬರ್ 2018, 19:31 IST
   

ನವದೆಹಲಿ: ಕಡ್ಡಾಯ ರಜೆಯ ಮೇಲೆ ಕಳಿಸಲಾಗಿರುವ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ನಡೆಸಿದ ಪ್ರಾಥಮಿಕ ತನಿಖಾ ವರದಿಯನ್ನು ಕೇಂದ್ರ ಜಾಗೃತ ಆಯೋಗವು (ಸಿವಿಸಿ) ಸೋಮವಾರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತು.

ವರದಿ ಸ್ವೀಕರಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಹಾಗೂ ನ್ಯಾಯಮೂರ್ತಿ ಎಸ್‌.ಕೆ.ಕೌಲ್‌ ಅವರ ಪೀಠವು ಮುಂದಿನ ವಿಚಾರಣೆಯನ್ನು ನವೆಂಬರ್‌ 16ಕ್ಕೆ ನಿಗದಿಪಡಿಸಿತು.

ಸಿಬಿಐನ ಮಧ್ಯಂತರ ನಿರ್ದೇಶಕರಾಗಿ ನೇಮಕವಾಗಿರುವ ಎಂ. ನಾಗೇಶ್ವರ ರಾವ್‌ ಅವರು ಅಕ್ಟೋಬರ್‌ 23 ರಿಂದ 26ರ ವರೆಗೆ ತೆಗೆದುಕೊಂಡ ನಿರ್ಧಾರಗಳ ಬಗ್ಗೆಯೂ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದರು.

ADVERTISEMENT

ನಾಗೇಶ್ವರ ರಾವ್‌ ಅವರು ಯಾವುದೇ ಮಹತ್ವದ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಅಧಿಕಾರ ವಹಿಸಿಕೊಂಡ ದಿನದಿಂದ ಈವರೆಗೆ ರಾವ್‌ ಅವರು ಕೈಗೊಂಡ ಎಲ್ಲ ನಿರ್ಧಾರಗಳ ಪಟ್ಟಿಯನ್ನು ವಿಚಾರಣೆ ವೇಳೆ ಸಲ್ಲಿಸಬೇಕು ಎಂದು ಪೀಠವು ಹೇಳಿತ್ತು.

ಅಸ್ತಾನಾ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿದ್ದ ಅಧಿಕಾರಿಗಳ ವರ್ಗಾವಣೆ ಮತ್ತು ಇತರ ಎಲ್ಲ ವರ್ಗಾವಣೆಗಳ ಮಾಹಿತಿಯನ್ನೂ ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಪೀಠವು ಸೂಚಿಸಿತ್ತು.

ಅಸಮಾಧಾನ

ಸಿವಿಸಿ ತನಿಖಾ ವರದಿ ಸಲ್ಲಿಸುವ ಬಗ್ಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್‌ ಅವರಿಗೆ ಯಾವುದೇ ಮಾಹಿತಿ ನೀಡದಿರುವುದಕ್ಕೆ ಮುಖ್ಯ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಮೆಹತಾಕ್ಷಮೆಯಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.