ADVERTISEMENT

ಸಿಬಿಐ ನಿರ್ದೇಶಕ ವರ್ಮಾ ವಿರುದ್ಧದ ತನಿಖೆ ಶೀಘ್ರ ಪೂರ್ಣಗೊಳಿಸಲು ಸುಪ್ರೀಂ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 6:30 IST
Last Updated 26 ಅಕ್ಟೋಬರ್ 2018, 6:30 IST
   

ನವದೆಹಲಿ: ತಮ್ಮನ್ನು ಒತ್ತಾಯಪೂರ್ವಕವಾಗಿ ರಜೆಯ ಮೇಲೆ ಕಳಿಸಿದ್ದನ್ನು ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್‌ ಕುಮಾರ್ ವರ್ಮಾ ಸಲ್ಲಿಸಿರುವ ಅರ್ಜಿಯ ವಿಚಾರಣೆಸುಪ್ರೀಂಕೋರ್ಟ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಆರಂಭವಾಯಿತು.

ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯ್ ನೇತೃತ್ವದ ನ್ಯಾಯಪೀಠವು, ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ಕೇಂದ್ರ ಜಾಗೃತ ಆಯೋಗವು 10 ದಿನಗಳ ಒಳಗೆ ತನಿಖೆ ಪೂರ್ಣಗೊಳಿಸಬೇಕು. ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಉಸ್ತುವಾರಿಯಲ್ಲಿ ತನಿಖೆ ನಡೆಬೇಕು.ನ್ಯಾಯಾಲಯದ ದೀಪಾವಳಿ ರಜೆಗಳ ನಂತರ, ಅಂದರೆ ನ.12ರಂದು ಪ್ರಕರಣದ ವಿಚಾರಣೆಯನ್ನು ಮತ್ತೆ ನಡೆಸಲಾಗುವುದು ಎಂದು ತಿಳಿಸಿತು.

ಸಿಬಿಐನ ಮಧ್ಯಂತರ ನಿರ್ದೇಶಕರಾಗಿ ಸರ್ಕಾರ ನೇಮಿಸಿರುವ ಎಂ.ನಾಗೇಶ್ವರ್ ರಾವ್ ಅವರು ಯಾವುದೇ ಮುಖ್ಯ ನೀತಿ ನಿರೂಪಣೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಅ.23ರಿಂದ ನ.12ರವರೆಗೆ ನಾಗೇಶ್ವರ್‌ ರಾವ್ ಅವರು ತೆಗೆದುಕೊಂಡಿರುವ ಎಲ್ಲ ನಿರ್ಧಾರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಬೇಕು ಎಂದು ಸೂಚಿಸಿತು.

ADVERTISEMENT

ಅಲೋಕ್ ವರ್ಮಾ ಪರ ವಾದ ಮಂಡಿಸಿದ ವಕೀಲ ಫಾಲಿ ನಾರಿಮನ್, ‘ಸಿಬಿಐ ನಿರ್ದೇಶಕರನ್ನು ಎರಡು ವರ್ಷಗಳ ಅವಧಿಗೆ ನೇಮಿಸಲಾಗುತ್ತದೆ. ಎರಡು ವರ್ಷಗಳ ಒಳಗೆ ಅವರನ್ನು ಪದಚ್ಯುತಗೊಳಿಸಲು ಅವಕಾಶವಿದೆಯೇ?’ ಎಂದು ಪ್ರಶ್ನಿಸಿದರು.

ಕೇಂದ್ರ ಜಾಗೃತ ಆಯೋಗವು ವರ್ಮಾ ಅವರ ವಿರುದ್ಧದ ತನಿಖೆ ಮುಗಿಯುವವರೆಗೆ ಅವರನ್ನುಸಿಬಿಐ ಕರ್ತವ್ಯಗಳಿಂದ ಬಿಡುಗಡೆ ಮಾಡುವ ಬಗ್ಗೆ ಆದೇಶ ಹೊರಡಿಸಿತು. ಅದೇ ದಿನ ಕೇಂದ್ರ ಸರ್ಕಾರವೂ ಮತ್ತೊಂದು ಆದೇಶ ಹೊರಡಿಸಿ, ಮಧ್ಯಂತರ ಕ್ರಮ ಎಂದು ಘೋಷಿಸಿ, ವರ್ಮಾ ಅವರ ಉತ್ತರಾಧಿಕಾರಿಯನ್ನು ನೇಮಿಸಿತು. ಇದು ಸರಿಯೇ? ಎಂದು ನಾರೀಮನ್ ಪ್ರಶ್ನಿಸಿದರು.

ನಾರೀಮನ್ ವಾದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್, ಈ ಕುರಿತು ಅಟಾರ್ನಿ ಜನರಲ್ಗಮನ ಹರಿಸಲಿದ್ದಾರೆ. ನಾವು ಈ ತಕ್ಷಣಕ್ಕೆ ತಾತ್ಕಾಲಿಕ ಕ್ರಮಗಳನ್ನುಸರಿಪಡಿಸುವ ಕುರಿತು ಗಮನ ಕೊಡಬೇಕಿದೆ ಎಂದರು.

ಸಿಬಿಐನ ವಿಶೇಷ ನಿರ್ದೇಶಕ ಆಸ್ತಾನಾ ಮತ್ತು ನಿರ್ದೇಶಕವರ್ಮಾ ಅವರ ನಡುವೆ ಈಚೆಗೆ ಹಗ್ಗಜಗ್ಗಾಟ ಆರಂಭವಾಗಿತ್ತು. ಆಸ್ತಾನಾ ಮತ್ತು ಲಂಚದ ಆರೋಪದ ಮೇಲೆ ಸಿಬಿಐ ವಶದಲ್ಲಿರುವ ಎಸ್‌ಪಿ ದೇವೇಂದರ್ ಕುಮಾರ್ವಿರುದ್ಧ ಸಿಬಿಐ ಎಫ್‌ಐಆರ್‌ ಸಹ ದಾಖಲಿಸಿತ್ತು.

ಬೆಂಗಳೂರು ಸೇರಿದಂತೆ ದೇಶದ ಎಲ್ಲ ಸಿಬಿಐ ಕಚೇರಿಗಳ ಎದುರು ಪ್ರತಿಭಟನೆಗೆ ಕರೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವರ್ಮಾ ಅವರಿಗೆನಿರ್ದೇಶಕ ಸ್ಥಾನದಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಆಸ್ತಾನಾ ಅರ್ಜಿ

ತಮ್ಮನ್ನು ಕಡ್ಡಾಯ ರಜೆಯ ಮೇಲೆ ಕಳಿಸಿರುವುದನ್ನುಪ್ರಶ್ನಿಸಿ ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ಸಹ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.