ನವದೆಹಲಿ(ಪಿಟಿಐ): ಸಿಬಿಎಸ್ಇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒದಗಿಸಲು ಯಾವುದೇ ಖಾಸಗಿ ಪ್ರಕಾಶಕರ ಜತೆಗೆ ಸಹಯೋಗ ಹೊಂದಿಲ್ಲ ಎಂದು ಸ್ಪಷ್ಟಪಡಿಸಿರುವ ಸಿಬಿಎಸ್ಇ, ಇಂತಹ ದಿಕ್ಕುತಪ್ಪಿಸುವಂತಹ ಮಾಹಿತಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಕಿವಿಗೊಡಬಾರದು ಎಂದು ಎಚ್ಚರಿಸಿದೆ.
ಸಿಬಿಎಸ್ಇ ತನ್ನ ಬೋರ್ಡ್ ಪರೀಕ್ಷೆಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ಹಣ ಪಾವತಿಸಿ ಪಡೆಯಲು ಎಜುಕಾರ್ಟ್ ಜತೆಗೆ ಒಪ್ಪಂದ ಮಾಡಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮಂಡಳಿಯು ಈ ಸ್ಪಷ್ಟನೆ ನೀಡಿದೆ.
‘ಎನ್ಇಪಿ 2020ರ ಶಿಫಾರಸಿನ ಪ್ರಕಾರ, ಮಂಡಳಿಯು ತನ್ನ ಸಂಯೋಜಿತ ಶಾಲೆಗಳಲ್ಲಿ ಸಾಮರ್ಥ್ಯ ಕೇಂದ್ರಿತ ಶಿಕ್ಷಣ ಮತ್ತು ಮೌಲ್ಯಮಾಪನವನ್ನು ಪ್ರಾರಂಭಿಸಿದೆ. ಇತ್ತೀಚೆಗೆ 10 ಮತ್ತು 12ನೇ ತರಗತಿಗಳ ಎಲ್ಲಾ ಪ್ರಮುಖ ವಿಷಯಗಳಲ್ಲಿ ಅಭ್ಯಾಸ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. ಈ ಅಭ್ಯಾಸ ಪತ್ರಿಕೆಗಳು ವಿಷಯಗಳ ಪರಿಕಲ್ಪನೆಯ ಗ್ರಹಿಕೆಯನ್ನು ಸಹ ಹೆಚ್ಚಿಸಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ’ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.