ADVERTISEMENT

ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕೀಯರದ್ದೇ ಮೇಲುಗೈ

ಪಿಟಿಐ
Published 12 ಮೇ 2023, 19:32 IST
Last Updated 12 ಮೇ 2023, 19:32 IST
12ನೇ ತರಗತಿಯಲ್ಲಿ ಉತ್ತೀರ್ಣರಾದ ಪಂಜಾಬಿನ ಅಮೃತಸರ ಶಾಲೆಯೊಂದರ ವಿದ್ಯಾರ್ಥಿಗಳು ಸಂಭ್ರಮಿಸಿದ್ದು ಹೀಗೆ – ಪಿಟಿಐ ಚಿತ್ರ
12ನೇ ತರಗತಿಯಲ್ಲಿ ಉತ್ತೀರ್ಣರಾದ ಪಂಜಾಬಿನ ಅಮೃತಸರ ಶಾಲೆಯೊಂದರ ವಿದ್ಯಾರ್ಥಿಗಳು ಸಂಭ್ರಮಿಸಿದ್ದು ಹೀಗೆ – ಪಿಟಿಐ ಚಿತ್ರ   

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಎರಡರಲ್ಲಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

10ನೇ ತರಗತಿಯ ಶೇ 93.12ರಷ್ಟು ಹಾಗೂ 12ನೇ ತರಗತಿಯ ಶೇ 87.33ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶವು ಕಳೆದ ಸಾಲಿಗಿಂತ ಕ್ರಮವಾಗಿ ಶೇ 1.28 ಹಾಗೂ ಶೇ 5.38ರಷ್ಟು ಕುಸಿತವಾಗಿದೆ.

10ನೇ ತರಗತಿಯಲ್ಲಿ ಪಾಸಾಗಿರುವ ಬಾಲಕಿಯರ ಪ್ರಮಾಣ ಶೇ 94.25ರಷ್ಟಿದ್ದರೆ, ಬಾಲಕರ ಪ್ರಮಾಣ ಶೇ 92.27ರಷ್ಟಿದೆ. 12ನೇ ತರಗತಿಯಲ್ಲಿ ತೇರ್ಗಡೆಯಾದ ಬಾಲಕಿಯರ ಪ್ರಮಾಣ ಶೇ 90.68ರಷ್ಟಿದ್ದರೆ, ಬಾಲಕರ ಪ್ರಮಾಣ ಶೇ 84.67ರಷ್ಟಾಗಿದೆ. ಕಳೆದ ವರ್ಷ 10 ಮತ್ತು 12ನೇ ತರಗತಿ ಫಲಿತಾಂಶ ಕ್ರಮವಾಗಿ ಶೇ 94.40 ಮತ್ತು ಶೇ 92.71ರಷ್ಟಿತ್ತು.

ADVERTISEMENT

ಮೆರಿಟ್‌ ಪಟ್ಟಿ ಇಲ್ಲ

ವಿದ್ಯಾರ್ಥಿಗಳ ನಡುವೆ ‘ಅನಾರೋಗ್ಯಕರ ಸ್ಪರ್ಧೆ’ ತಪ್ಪಿಸಲು ಮೆರಿಟ್‌ ಪಟ್ಟಿಯನ್ನು ಪ್ರಕಟಿಸುವುದಿಲ್ಲ ಎಂದು ಮಂಡಳಿ ಘೋಷಿಸಿದೆ. ಅಲ್ಲದೆ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಆಧರಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ನೀಡುವುದನ್ನು ರದ್ದುಗೊಳಿಸಲು ಮಂಡಳಿ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ವಿವಿಧ ವಿಷಯಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದಿರುವ ಶೇ 0.1ರಷ್ಟು ವಿದ್ಯಾರ್ಥಿಗಳಿಗೆ ಮಂಡಳಿ ‘ಮೆರಿಟ್‌ ಪ್ರಮಾಣ ಪತ್ರ’ ನೀಡಲಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವರ್ಷ 10 ಮತ್ತು 12ನೇ ತರಗತಿ ಪರೀಕ್ಷೆಯನ್ನು ಕ್ರಮವಾಗಿ 21.66 ಲಕ್ಷ ಹಾಗೂ 16.60 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.

ಹೆಚ್ಚು ಅಂಕ ಪಡೆದವರ ಸಂಖ್ಯೆ ಇಳಿಕೆ

10 ಮತ್ತು 12ನೇ ತರಗತಿಯ 3.08 ಲಕ್ಷ ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಹಾಗೂ 63,000 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಕಳೆದ ವರ್ಷ ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು 3.71 ಲಕ್ಷ ಹಾಗೂ ಶೇ 95ಕ್ಕಿಂತ ಹೆಚ್ಚು ಅಂಕಗಳನ್ನು 98,340 ವಿದ್ಯಾರ್ಥಿಗಳು ಪಡೆದಿದ್ದರು.

ಈ ವರ್ಷ 12ನೇ ತರಗತಿಯಲ್ಲಿ 22,622 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಹಾಗೂ 1.12 ಲಕ್ಷ ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 10ನೇ ತರಗತಿಯಲ್ಲಿ 44,297 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಹಾಗೂ 1.95 ಲಕ್ಷ ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

ಕಳೆದ ವರ್ಷ ಕೋವಿಡ್‌ ಕಾರಣದಿಂದ ಶೈಕ್ಷಣಿಕ ವರ್ಷವನ್ನು ವಿಭಜಿಸಿ ಎರಡು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಬಾರಿ ಒಂದೇ ಪರೀಕ್ಷೆ ನಡೆಸಿರುವ ಕಾರಣ, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಕುಸಿತ ದಾಖಲಾಗಿದೆ ಎಂದು ಮಂಡಳಿ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಮುಂದಿನ ವರ್ಷ ಫೆ. 15ರಿಂದ ಪರೀಕ್ಷೆ 2023–24ನೇ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಯ ಪರೀಕ್ಷೆ 2024ರ ಫೆಬ್ರುವರಿ 15ರಿಂದ ಆರಂಭವಾಗಲಿದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಸಂಯಮ್‌ ಭಾರದ್ವಾಜ್‌ ತಿಳಿಸಿದ್ದಾರೆ. ಶೈಕ್ಷಣಿಕ ವರ್ಷದ ವೇಳಾಪಟ್ಟಿ ಸಿದ್ಧಪಡಿಸಲು ಮತ್ತು ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶಿಕ್ಷಣ ಸಚಿವಾಲಯವು ಪರೀಕ್ಷಾ ವೇಳಾಪಟ್ಟಿಯನ್ನು ಮುಂಚಿತವಾಗಿಯೇ ಪ್ರಕಟಿಸಲು ನಿರ್ಧರಿಸಿತ್ತು.
‘ಕಂಪಾರ್ಟ್‌ಮೆಂಟ್‌’ ಪರೀಕ್ಷೆ ಇನ್ನು ಪೂರಕ ಪರೀಕ್ಷೆ ನವದೆಹಲಿ (ಪಿಟಿಐ): 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದ್ದ ‘ಕಂಪಾರ್ಟ್‌ಮೆಂಟ್‌’ ಪರೀಕ್ಷೆಯ ಹೆಸರನ್ನು ‘ಪೂರಕ’ ಪರೀಕ್ಷೆ ಎಂದು ಬದಲಿಸಿರುವುದಾಗಿ ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಸಂಯಮ್‌ ಭಾರದ್ವಾಜ್‌ ಶುಕ್ರವಾರ ತಿಳಿಸಿದ್ದಾರೆ.  10ನೇ ತರಗತಿ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಮೂಲಕ ಎರಡು ವಿಷಯಗಳಲ್ಲಿ ಹಾಗೂ 12ನೇ ತರಗತಿ ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಅವಕಾಶ ಪಡೆಯಲಿದ್ದಾರೆ. ಜುಲೈನಲ್ಲಿ ಪೂರಕ ಪರೀಕ್ಷೆ: ಈ ವರ್ಷ ಜುಲೈನಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸಲಾಗುವುದು. ಸದ್ಯದಲ್ಲಿಯೇ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ. 10ನೇ ತರಗತಿಯ 1.34 ಲಕ್ಷ ಹಾಗೂ 12ನೇ ತರಗತಿಯ 1.25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲಿದ್ದಾರೆ.
ಶಾಲಾವಾರು ಫಲಿತಾಂಶ 12ನೇ ತರಗತಿ
ಸಿಬಿಎಸ್‌ಇ ಜತೆ ಸಂಯೋಜಿತಗೊಂಡಿರುವ ವಿದೇಶಿ ಶಾಲೆಗಳಲ್ಲಿ ಶೇ 92.59ರಷ್ಟು ಫಲಿತಾಂಶ ದೊರೆತಿದೆ. ಜವಾಹರ ನವೋದಯ ವಿದ್ಯಾಲಯ (ಜೆಎನ್‌ವಿ) ಶೇ 97.51 ಕೇಂದ್ರೀಯ ವಿದ್ಯಾಲಯ ಶೇ 92.51 ಖಾಸಗಿ ಶಾಲೆಗಳು ಶೇ 87.95 ಹಾಗೂ ಸರ್ಕಾರಿ ಅನುದಾನಿತ ಮತ್ತು ಸರ್ಕಾರಿ ಶಾಲೆಗಳು ಕ್ರಮವಾಗಿ ಶೇ 97.17 ಹಾಗೂ ಶೇ 83.73ರಷ್ಟು ಫಲಿತಾಂಶ ಪಡೆದಿವೆ.
10ನೇ ತರಗತಿ
ವಿದೇಶಿ ಶಾಲೆಗಳಲ್ಲಿ ಶೇ 97.94 ಜವಾಹರ ನವೋದಯ ವಿದ್ಯಾಲಯ (ಜೆಎನ್‌ವಿ) ಶೇ 99.14 ಕೇಂದ್ರೀಯ ವಿದ್ಯಾಲಯ ಶೇ 98 ಅನುದಾನಿತ ಮತ್ತು ಸರ್ಕಾರಿ ಶಾಲೆಗಳು ಕ್ರಮವಾಗಿ ಶೇ 81.57 ಮತ್ತು ಶೇ 80.38ರಷ್ಟು ಫಲಿತಾಂಶ ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.