ADVERTISEMENT

‘ಸ್ತ್ರೀ ದ್ವೇಷ’ದ ಪ್ರಶ್ನೆ ಕೈಬಿಟ್ಟ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪೂರ್ಣ ಅಂಕ

ಪಿಟಿಐ
Published 13 ಡಿಸೆಂಬರ್ 2021, 11:40 IST
Last Updated 13 ಡಿಸೆಂಬರ್ 2021, 11:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‌ಇ) 10ನೇ ತರಗತಿ ಇಂಗ್ಲಿಷ್‌ ವಿಷಯದ ಪರೀಕ್ಷೆಗೆ ನೀಡಲಾಗಿದ್ದ ವಿವರಣಾತ್ಮಕ ಅಡಕ ಮತ್ತು ಸಂಬಂಧಿತ ಪ್ರಶ್ನೆಗಳನ್ನು ಕೈಬಿಟ್ಟಿದ್ದು, ಈ ಪ್ರಶ್ನೆಗೆ ನಿಗದಿಪಡಿಸಿದ ಅಂಕವನ್ನು ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣವಾಗಿ ನೀಡಲು ತೀರ್ಮಾನಿಸಿದೆ.

ಉಲ್ಲೇಖಿತ ವಿವರಣಾತ್ಮಕ ಅಡಕ ಮತ್ತು ಪ್ರಶ್ನೆಗಳ ಮೂಲಕ ಸಿಬಿಎಸ್ಇ, ಲಿಂಗ ಏಕತಾನತೆ ಮತ್ತು ಪ್ರತಿಗಾಮಿ ಚಿಂತನೆಗಳಿಗೆ ಪ್ರಚೋದನೆ ನೀಡುತ್ತಿದೆ ಎಂಬ ಆಕ್ಷೇಪ ವ್ಯಾಪಕವಾಗಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಡಳಿಯು ವಿಷಯವನ್ನು ಪರಿಣತರ ತಂಡಕ್ಕೆ ಒಪ್ಪಿಸಿದ್ದು, ಪ್ರತಿಕ್ರಿಯೆ ನೀಡುವಂತೆ ಕೋರಿತ್ತು.

ಶನಿವಾರ ನಡೆದಿದ್ದ ಇಂಗ್ಲಿಷ್ ವಿಷಯದ ಪರೀಕ್ಷೆಯಲ್ಲಿ ‘ಮಹಿಳಾ ವಿಮೋಚನೆಯು ಪೋಷಕರನ್ನು ಸಂಕಟಕ್ಕೀಡುಮಾಡಿದೆ’, ‘ಮಕ್ಕಳ ಮೇಲಿನ ಪಾರುಪತ್ಯ’, ‘ಗಂಡನ ನಿಲುವನ್ನು ಒಪ್ಪುವ ಮೂಲಕ ತಾಯಿ, ಕಿರಿಯರ ವಿಧೇಯತೆಗೆ ಪಾತ್ರರಾಗುತ್ತಾಳೆ’ ಎಂಬ ಸಾಲುಗಳಿದ್ದ ವಿವರಣಾತ್ಮಕ ಅಡಕ ಮತ್ತು ಸಂಬಂಧಿಸಿದ ಪ್ರಶ್ನೆಗಳಿದ್ದವು.

ADVERTISEMENT

ಈ ಅಡಕದಿಂದ ಆಯ್ದ ಸಾಲುಗಳು"#CBSEinsultswomen" ಹ್ಯಾಷ್‌ಟ್ಯಾಗ್‌ ಜೊತೆಗೆ ಟ್ವಿಟರ್‌ನಲ್ಲಿ ವೈರಲ್ ಆಗಿತ್ತು. ಮಂಡಳಿಯು ಸ್ತ್ರೀದ್ವೇಷದ ಭಾವನೆಗಳಿಗೆ ಪುಷ್ಟಿ ನೀಡುತ್ತಿದೆ. ಸಮಾಜದಲ್ಲಿ ಪ್ರತಿಗಾಮಿ ಚಿಂತನೆಗಳನ್ನು ಬೆಳೆಸುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.

‘ಇಂಗ್ಲಿಷ್ ವಿಷಯದ ಪರೀಕ್ಷೆಗೆ ನೀಡಿದ್ದ ಭಾಷೆ, ಸಾಹಿತ್ಯ ಕುರಿತ ಪ್ರಶ್ನೆಪತ್ರಿಕೆಯಲ್ಲಿನ ಅಡಕವು ಮಂಡಳಿಯ ಪ್ರಶ್ನೆಪತ್ರಿಕೆ ರೂಪಿಸುವ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಭಾಗಿದಾರರ ಪ್ರತಿಕ್ರಿಯೆ ಆಧರಿಸಿ, ಪರಿಣತರ ಸಮಿತಿ ಅಭಿಪ್ರಾಯ ಕೇಳಲಾಗಿತ್ತು. ಸಮಿತಿಯ ಶಿಫಾರಸಿನಂತೆ ಅದನ್ನು ಕೈಬಿಡಲು ತೀರ್ಮಾನಿಸಲಾಗಿದೆ‘ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಸಾನ್ಯಂ ಭಾರಧ್ವಾಜ್‌ ತಿಳಿಸಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಸೋಮವಾರ, ‘ಇದು ಶಿಕ್ಷಣ ಮತ್ತು ಪರೀಕ್ಷೆಯ ಸ್ವರೂಪ ಎಷ್ಟು ಕಳಪೆಯಾಗಿದೆ ಎಂಬುದನ್ನು ಬಿಂಬಿಸಲಿದೆ‘ ಎಂದು ಟೀಕಿಸಿದ್ದರು. ಲೋಕಸಭೆಯ ಶೂನ್ಯವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದ ಅವರು, ‘ಪ್ರಶ್ನೆ ಹಿಂಪಡೆಯಬೇಕು, ಕ್ಷಮೆ ಕೋರಬೇಕು’ ಎಂದೂ ಆಗ್ರಹಿಸಿದ್ದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಟ್ವಿಟರ್‌ನಲ್ಲಿ ಈ ವಿಷಯ ಉಲ್ಲೇಖಿಸಿ ಟೀಕಿಸಿದ್ದರು. ‘ಭವಿಷ್ಯದಲ್ಲಿ ಯುವಜನರ ನೈತಿಕತೆ ಹಾಳುಗೆಡವಲು ಆರ್‌ಎಸ್‌ಎಸ್‌–ಬಿಜೆಪಿ ಯತ್ನಿಸಿದಂತಿದೆ. ಮಕ್ಕಳೇ ನೀವು ಚೆನ್ನಾಗಿ ಓದಿ. ನಿಮಗೆ ಕಠಿಣ ಶ್ರಮವಷ್ಟೇ ಫಲ ನೀಡಲಿದೆ, ಧರ್ಮಾಂಧತೆಯಲ್ಲ’ ಎಂದು ಹೇಳಿದ್ದರು.

ಸಿಬಿಎಸ್ಇ ಕಳೆದ ತಿಂಗಳು ನಡೆಸಿದ್ದ 12ನೇ ತರಗತಿಯ ಸಮಾಜವಿಜ್ಞಾನ ವಿಷಯದ ಪರೀಕ್ಷೆಯಲ್ಲಿ ‘ಗುಜರಾತ್‌ನಲ್ಲಿ 2002ರಲ್ಲಿ ಮುಸ್ಲಿ ವಿರೋಧಿ ಹಿಂಸೆಗೆ ಕಾರಣವಾದ ಪಕ್ಷ ಯಾವುದು’ ಎಂದು ಪ್ರಶ್ನೆ ಕೇಳಿತ್ತು. ಬಳಿಕ, ಇದು ಮಂಡಳಿಯ ಪರೀಕ್ಷಾ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾದುದಾಗಿದೆ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.