ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿಯ ಈ ವರ್ಷದ ಪರೀಕ್ಷೆಗಳನ್ನು ರದ್ದು ಮಾಡಲು ಕೇಂದ್ರ ಸರ್ಕಾರವು ಮಂಗಳವಾರ ನಿರ್ಧರಿಸಿದೆ. ಕೋವಿಡ್–19 ಸಾಂಕ್ರಾಮಿಕ ತೀವ್ರವಾಗಿರುವ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ.
‘ಕೋವಿಡ್‌ನಿಂದಾಗಿ ದೇಶದಲ್ಲಿ ಅನಿಶ್ಚಿತ ಸ್ಥಿತಿ ಇದೆ. ಹಾಗಾಗಿ, ಸಂಬಂಧಪಟ್ಟವರಿಂದ ಪಡೆದ ಮಾಹಿತಿ ಪ್ರಕಾರ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಲು ತೀರ್ಮಾನಿಸಲಾಗಿದೆ’ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸುವುದಕ್ಕೆ ಬೇಕಾದ ಕ್ರಮಗಳನ್ನು ಸಿಬಿಎಸ್‌ಇ ಕೈಗೊಳ್ಳಲಿದೆ. ನ್ಯಾಯಯುತವಾಗಿ, ಸಮಯ ಮಿತಿಯೊಳಗೆ ಅತ್ಯಂತ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಮಾನದಂಡಗಳ ಅನ್ವಯ ಫಲಿತಾಂಶ ಸಿದ್ಧಪಡಿಸಬೇಕು ಎಂದು ಪ್ರಧಾನಿಯು ಸಿಬಿಎಸ್‌ಇಗೆ ಸೂಚಿಸಿದ್ದಾರೆ.
‘ಒತ್ತಡದಿಂದ ಕೂಡಿದ ಈಗಿನ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಬಲವಂತ ಮಾಡುವುದು ಸರಿಯಲ್ಲ’ ಎಂದು ಪ‍್ರಧಾನಿಸಭೆಯಲ್ಲಿ ಹೇಳಿದ್ದಾರೆ.
ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಯಸಿದರೆ ಅಂಥವರಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಲು ನಿರ್ಧರಿಸಲಾಗಿದೆ. ಪರಿಸ್ಥಿತಿಯು ಪರೀಕ್ಷೆ ನಡೆಸಲು ಪೂರಕವಾದಾಗ ಈ ಪರೀಕ್ಷೆ ನಡೆಯಲಿದೆ.
12ನೇ ತರಗತಿಯ ಪರೀಕ್ಷೆ ನಡೆಸುವ ವಿಚಾರದಲ್ಲಿ ರಾಜ್ಯಗಳ ಜತೆಗೆ ಕೇಂದ್ರವು ಮೇ 23ರಂದು ಸಮಾಲೋಚನೆ ನಡೆಸಿತ್ತು. ಕೆಲವು ವಿಷಯಗಳಿಗೆ ಅಲ್ಪ ಅವಧಿಯ ಪರೀಕ್ಷೆ ನಡೆಸಬೇಕು ಎಂದು ಸಭೆಯಲ್ಲಿ ಸಹಮತ ಮೂಡಿತ್ತು.
ವಿದ್ಯಾರ್ಥಿಗಳು ಮತ್ತು ಹೆತ್ತವರ ಒಂದು ವರ್ಗದಿಂದ ಪರೀಕ್ಷೆ ರದ್ದು ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ವಿದ್ಯಾರ್ಥಿಗಳ ಒಂದು ಗುಂಪು ಪರೀಕ್ಷೆ ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಿತ್ತು.
ಐಸಿಎಸ್‌ಇ ಪರೀಕ್ಷೆ ರದ್ದು: ಐಸಿಎಸ್‌ಇ 12ನೇ ತರಗತಿಯ ಈ ವರ್ಷದ ಪರೀಕ್ಷೆಯನ್ನೂ ರದ್ದು ಮಾಡಲಾಗಿದೆ ಎಂದು ಐಸಿಎಸ್‌ಇ ಕಾರ್ಯದರ್ಶಿ ಜೆರಿ ಆರಾಥೂನ್ ತಿಳಿಸಿದ್ದಾರೆ.
ಮಾನದಂಡ ಇನ್ನೂ ಸಿದ್ಧವಿಲ್ಲ: ವಿದ್ಯಾರ್ಥಿಗಳ ಮೌಲ್ಯಮಾಪನದ ಪರ್ಯಾಯ ಮಾನದಂಡವು ಇನ್ನೂ ಸಿದ್ಧವಾಗಿಲ್ಲ. 10ನೇ ತರಗತಿಯ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಬಳಸಿದ ಮಾನದಂಡಗಳ ಮಾದರಿಯನ್ನೇ ಅನುಸರಿಸುವ ಸಾಧ್ಯತೆ ಇದೆ. ಇಡೀ ವರ್ಷ ನಡೆದ ಪರೀಕ್ಷೆಗಳಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ಸಾಧನೆಯನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗಿತ್ತು.
10ನೇ ತರಗತಿ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನವಾಗಿ 20 ಅಂಕಗಳನ್ನು ನಿಗದಿ ಮಾಡಲಾಗಿತ್ತು. ವರ್ಷವಿಡೀ ನಡೆದ ವಿವಿಧ ಪರೀಕ್ಷೆಗಳಿಗೆ ಉಳಿದ 80 ಅಂಕಗಳನ್ನು ನಿಗದಿ ಮಾಡಲಾಗಿತ್ತು.
ಪೂರ್ಣ ರದ್ದತಿ ಇದೇ ಮೊದಲು: ಸಿಬಿಎಸ್‌ಇ ಪರೀಕ್ಷೆಗಳನ್ನು ಸಂಪೂರ್ಣವಾಗಿ ರದ್ದು ಮಾಡಿದ್ದು ಇದೇ ಮೊದಲು. ಕಳೆದ ವರ್ಷ ಕೋವಿಡ್ ಹರಡುವಿಕೆ ತಡೆಗೆ ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಆದಾಗ ಸಿಬಿಎಸ್‌ಇ 12ನೇ ತರಗತಿಯ ಹಲವು ಪರೀಕ್ಷೆಗಳು ಆಗಿದ್ದವು. ಉಳಿದ ಪರೀಕ್ಷೆಗಳನ್ನು ರದ್ದು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.