ನವದೆಹಲಿ: ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ₹3.03 ಲಕ್ಷ ಕೋಟಿ ಮೊತ್ತದ ಯೋಜನೆಗೆ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (ಸಿಸಿಇಎ) ಬುಧವಾರ ಅನುಮೋದನೆ ನೀಡಿದೆ.
ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಹೀಗಾಗಿ, ಹೊಸ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಸಿಸಿಇಎ ಸಭೆಯ ನಂತರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ತಿಳಿಸಿದ್ದಾರೆ.
ವಿದ್ಯುತ್ ವಿತರಣಾ ಕಂಪನಿಗಳಿಗೆ (ಡಿಸ್ಕಾಮ್ಸ್) ಮೂಲಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ತಮ್ಮ ವ್ಯವಸ್ಥೆ ಬಲಪಡಿಸಲು ಮತ್ತು ಹಣಕಾಸು ಸ್ಥಿರತೆ ಕಾಯ್ದುಕೊಳ್ಳಲು ಈ ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಯೋಜನೆ ಅಡಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಮರ್ಪಕ ವಿದ್ಯುತ್ ಪೂರೈಸಲು ಉದ್ದೇಶ ಹೊಂದಲಾಗಿದೆ. ಸೌರಶಕ್ತಿ ಮೂಲಕ ಹಗಲು ಹೊತ್ತಿನಲ್ಲಿ ರೈತರಿಗೆ ವಿದ್ಯುತ್ ಪೂರೈಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಗೂ ಮತ್ತು ಈ ಹಿಂದೆ ಘೋಷಿಸಿದ ಯೋಜನೆಗೂ ವ್ಯತ್ಯಾಸವಿದೆ. ಈ ಮೊತ್ತವನ್ನು ಷರತ್ತು ಆಧರಿಸಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಷ್ಟದಲ್ಲಿರುವ ವಿದ್ಯುತ್ ವಿತರಣಾ ಕಂಪನಿಗಳಿಗೆ ಈ ಯೋಜನೆ ಅಡಿಯಲ್ಲಿನ ಮೊತ್ತವು ದೊರೆಯುವುದಿಲ್ಲ. ಆದರೆ, ನಷ್ಟವನ್ನು ಸರಿಪಡಿಸಲು ಕೈಗೊಳ್ಳಲಾದ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಿದಾಗ ಮಾತ್ರ ಅನುದಾನ ದೊರೆಯಬಹುದು ಎಂದು ಸಚಿವರು ತಿಳಿಸಿದ್ದಾರೆ.
ಜತೆಗೆ, 25 ಕೋಟಿ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ, 10 ಸಾವಿರ ಫೀಡರ್‌ಗಳ ಸ್ಥಾಪನೆ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ 5 ವರ್ಷಗಳಲ್ಲಿ ತಾಂತ್ರಿಕ ಮತ್ತು ವಾಣಿಜ್ಯದ ಒಟ್ಟು ನಷ್ಟವನ್ನು ಶೇ 12ಕ್ಕೆ ಕಡಿಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಪ್ರಸ್ತುತ ಶೇಕಡ 21ರಷ್ಟು ನಷ್ಟ ಪ್ರಮಾಣ ಇದೆ ಎಂದು ವಿವರಿಸಿದ್ದಾರೆ.
ವಿದ್ಯುತ್ ವಿತರಣೆಗೆ ಸಂಬಂಧಿಸಿದ ಯೋಜನೆಯನ್ನು ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.
ಕೇಂದ್ರ ಯೋಜನೆಗಳಾದ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ, ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ, ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ) ಯೋಜನೆಗಳು ವಿಲೀನಗೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.