ಚೆನ್ನೈ: ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದಲ್ಲಿ ಪೊಲೀಸರ ಸೂಚನೆ ಮೇರೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಸ್ವಿಚ್ಡ್ ಆಫ್ ಮಾಡಲಾಗಿತ್ತು ಎಂದು ಅಪೊಲೊ ಆಸ್ಪತ್ರೆ ತಿಳಿಸಿದೆ.
ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎ.ಆರ್ಮುಗಸ್ವಾಮಿ ಆಯೋಗಕ್ಕೆ ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಿದೆ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಪತ್ರಿಕಾ ಪ್ರಕಟನೆಗಳ ಕುರಿತು ವಿವರ ನೀಡುವಂತೆ ಆಯೋಗ ಆಸ್ಪತ್ರೆಗೆ ಸೂಚಿಸಿತ್ತು.
‘ಅಂತರರಾಷ್ಟ್ರೀಯ ಮಾನದಂಡದಂತೆ ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಯಾವುದೇ ಚಿಕಿತ್ಸಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಭದ್ರತಾ ದೃಷ್ಟಿಯಿಂದ ಆಸ್ಪತ್ರೆಯ ಆವರಣ, ಪ್ರವೇಶ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದು ಆಸ್ಪತ್ರೆಯ ಕಾನೂನು ವ್ಯವಸ್ಥಾಪಕ ಎಸ್.ಎಂ. ಮೋಹನ್ ಕುಮಾರ್ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
‘ಜಯಲಲಿತಾ ಅವರನ್ನು ವಿವಿಧ ಪರೀಕ್ಷೆಗಳಿಗೆ ಆಸ್ಪತ್ರೆಯಲ್ಲಿನ ಅವರ ಕೊಠಡಿಯಿಂದ ಕರೆದೊಯ್ಯುವಾಗ ಆ ಮಾರ್ಗಗಳನ್ನು ಸ್ವಿಚ್ಡ್ ಆಫ್ ಮಾಡಲಾಗುತ್ತಿತ್ತು. ಐಜಿಪಿ (ಗುಪ್ತದಳ) ಕೆ.ಎನ್. ಸತ್ಯಮೂರ್ತಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಈ ಕ್ರಮಕೈಗೊಳ್ಳಲಾಗಿತ್ತು’ ಎಂದು ಆಸ್ಪತ್ರೆಯ ವಕೀಲರಾಗಿರುವ ಮೈಮೂನಾ ಬಾದ್‌ಷಾ ತಿಳಿಸಿದ್ದಾರೆ.
‘ಚಿಕಿತ್ಸಾ ಕೊಠಡಿಗೆ ಜಯಲಲಿತಾ ಅವರು ತೆರಳಿದ ಬಳಿಕ ಕ್ಯಾಮೆರಾಗಳು ಮತ್ತೆ ಕಾರ್ಯನಿರ್ವಹಿಸುತ್ತಿದ್ದವು. ಜಯಾ ಅವರ ಕೊಠಡಿ ಇದ್ದ ಎರಡನೇ ಮಹಡಿ ಪೊಲೀಸರ ನಿಗಾದಲ್ಲಿತ್ತು. ಈ ಮಹಡಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು’ ಎಂದು ತಿಳಿಸಿದ್ದಾರೆ.
‘2016ರ ಸೆಪ್ಟೆಂಬರ್ 23ರಂದು ಹೊರಡಿಸಿದ್ದ ಮೊದಲ ಪತ್ರಿಕಾ ಪ್ರಕಟಣೆಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಜಯಲಲಿತಾ ಭಾಗಿಯಾಗಿದ್ದರು. ಯಾವುದೇ ರೀತಿಯ ಆತಂಕದ ವಾತಾವರಣ ಸೃಷ್ಟಿಯಾಗದಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎನ್ನುವುದು ಜಯಲಲಿತಾ ಅವರ ಆಶಯವಾಗಿತ್ತು’ ಎಂದು ವಿವರಿಸಿದ್ದಾರೆ.
‘ಬಳಿಕ, ಜಯಾ ಅವರ ಆರೋಗ್ಯ ಸ್ಥಿತಿಯ ಪತ್ರಿಕಾ ಪ್ರಕಟಣೆಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಮ ಮೋಹನ್ ರಾವ್ ಮತ್ತು ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಅವರಿಂದ ಅನುಮೋದನೆ ಪಡೆದ ಬಳಿಕವೇ ಮಾಧ್ಯಮಗಳಿಗೆ ನೀಡಲಾಗುತ್ತಿತ್ತು’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.