ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರಿ ಭೂಕುಸಿತದಲ್ಲಿ ಅಪಾರ ನಾಶ ನಷ್ಟ ಉಂಟಾಗಿತ್ತು. ಸಿಸಿಟಿವಿಯಲ್ಲಿ ಭೂಕುಸಿತದ ಭಯಾನಕ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಭೂಕುಸಿತದ ಕರಾಳ ನೆನಪು ಸಂತ್ರಸ್ತರನ್ನು ಇನ್ನೂ ಕಾಡುತ್ತಲೇ ಇದೆ. ಈಗ ವಿನಾಶಕಾರಿ ಭೂಕುಸಿತದ ತೀವ್ರತೆ ಎಷ್ಟಿತ್ತು ಎಂಬುದಕ್ಕೆ ಈ ವಿಡಿಯೊ ಸಾಕ್ಷಿಯಾಗಿದೆ.
ಶರವೇಗದಲ್ಲಿ ನುಗ್ಗಿದ ಪ್ರವಾಹದ ನೀರಿನ ರಭಸಕ್ಕೆ ಕ್ಷಣಾರ್ಧದಲ್ಲಿ ಕಟ್ಟಡದ ಗೋಡೆಗಳು ಧ್ವಂಸಗೊಂಡಿವೆ.
ಚೂರಲ್‌ಮಲದಲ್ಲಿ ಸಂಪೂರ್ಣವಾಗಿ ನಾಶಗೊಂಡಿರುವ ಅಂಗಡಿಗಳಲ್ಲಿದ್ದ ಸಿಸಿಟಿವಿಗಳಲ್ಲಿ ಸೆರೆಹಿಡಿಯಲಾದ ದೃಶ್ಯಗಳು ಈಗ ಮಲಯಾಳಂ ಚಾನೆಲ್‌ಗಳಿಗೆ ಲಭ್ಯವಾಗಿವೆ.
ಒಂದು ವಿಡಿಯೊದಲ್ಲಿ ಪ್ರವಾಹದ ನೀರಿನೊಂದಿಗೆ ಬೃಹತ್ ಬಂಡೆಕಲ್ಲುಗಳು ಅಂಗಡಿಗಳಿಗೆ ಬಂದು ಅಪ್ಪಳಿಸಿದೆ. ಮತ್ತೊಂದು ದೃಶ್ಯದಲ್ಲಿ ಪ್ರಾಣಿಗಳು ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ.
ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿವೆ.
ಜುಲೈ 30ರಂದು ಸಂಭವಿಸಿದ್ದ ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಸಂತ್ರಸ್ತರಿಗೆ ಪುನರ್ವಸತಿ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ದುರಂತದಲ್ಲಿ ಇನ್ನೂ 119 ಮಂದಿ ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ ಇದು ಅಂತಿಮ ಪಟ್ಟಿಯಲ್ಲ ಎಂದು ತಿಳಿದು ಬಂದಿದೆ.
ವಿಡಿಯೊ ಕೃಪೆ: X/@Onmanorama
ವಿಡಿಯೊ ಕೃಪೆ: ಏಷ್ಯಾನೆಟ್ ನ್ಯೂಸ್
ವಿಡಿಯೊ ಕೃಪೆ: ಏಷ್ಯಾನೆಟ್ ನ್ಯೂಸ್
ವಿಡಿಯೊ ಕೃಪೆ: ಏಷ್ಯಾನೆಟ್ ನ್ಯೂಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.