ADVERTISEMENT

ಆಕ್ಸ್‌ಫರ್ಡ್‌ ಲಸಿಕೆ ಬಳಕೆಗೆ ಅನುಮತಿ

ಔಷಧ ಮಹಾನಿಯಂತ್ರಕರ ಅನುಮತಿ ಮಾತ್ರ ಬಾಕಿ

ಪಿಟಿಐ
Published 1 ಜನವರಿ 2021, 19:31 IST
Last Updated 1 ಜನವರಿ 2021, 19:31 IST
ಕೋವಿಡ್‌ ಲಸಿಕೆ (ಸಾಂದರ್ಭಿಕ ಚಿತ್ರ)
ಕೋವಿಡ್‌ ಲಸಿಕೆ (ಸಾಂದರ್ಭಿಕ ಚಿತ್ರ)   

ನವದೆಹಲಿ: ಆಕ್ಸ್‌ಫರ್ಡ್ ಯುನಿವರ್ಸಿಟಿ ಹಾಗೂ ಅಸ್ಟ್ರಾಜೆನೆಕಾ ಸಂಸ್ಥೆಗಳು ಕೋವಿಡ್–19ಗೆ ಅಭಿವೃದ್ಧಿಪಡಿಸಿದ ‘ಕೋವಿಶೀಲ್ಡ್‌’ ಲಸಿಕೆಯನ್ನು ಭಾರತದಲ್ಲಿ ತುರ್ತು ಸಂದರ್ಭದ ಬಳಕೆಗೆ ತಜ್ಞರ ಸಮಿತಿಯು ಶುಕ್ರವಾರ ಅನುಮೋದನೆ ನೀಡಿದೆ.

ಲಸಿಕೆ ಬಳಕೆಯ ಅಂತಿಮ ತೀರ್ಮಾನವನ್ನು ಭಾರತೀಯ ಔಷಧ ಮಹಾನಿಯಂತ್ರಕರು ಪ್ರಕಟಿಸಬೇಕಾಗಿದೆ. ಭಾರತದಲ್ಲಿ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಸಂಸ್ಥೆ ಈ ಲಸಿಕೆಯನ್ನು ತಯಾರಿಸುತ್ತಿದೆ.

ತಾವು ಅಭಿವೃದ್ಧಿಪಡಿಸಿದ ಲಸಿಕೆಯ ತುರ್ತು ಸಂದರ್ಭದ ನಿಯಂತ್ರಿತ ಬಳಕೆಗೆ ಅನುಮತಿ ನೀಡುವಂತೆ ಎಸ್‌ಐಐ ಹಾಗೂ ಭಾರತ್‌ ಬಯೊಟೆಕ್‌ (ಕೊವ್ಯಾಕ್ಸಿನ್‌ ಲಸಿಕೆ) ಸಂಸ್ಥೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಮನವಿಯ ಹಿನ್ನೆಲೆಯಲ್ಲಿ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಿತ್ತು. ಗುರುವಾರ ಸಭೆ ನಡೆಸಿದ್ದ ಸಮಿತಿಯು, ಲಸಿಕೆಯ ಪ್ರಯೋಗಗಳನ್ನು ಕುರಿತ ಇನ್ನಷ್ಟು ದತ್ತಾಂಶ ಹಾಗೂ ವಿವರಗಳನ್ನು ನೀಡುವಂತೆ ಸಂಸ್ಥೆಗಳಿಗೆ ಸೂಚಿಸಿತ್ತು.

ADVERTISEMENT

ಎರಡೂ ಸಂಸ್ಥೆಗಳು ಸಲ್ಲಿಸಿದ್ದ ಹೆಚ್ಚುವರಿ ದತ್ತಾಂಶ ಹಾಗೂ ಇತರ ಮಾಹಿತಿಗಳನ್ನು ತಜ್ಞರ ಸಮಿತಿಯು ಶುಕ್ರವಾರದ ಸಭೆಯಲ್ಲಿ ಪರಿಶೀಲನೆ ನಡೆಸಿ, ಕೋವಿಶೀಲ್ಡ್‌ ಲಸಿಕೆಯ ಬಳಕೆಗೆ ಅನುಮತಿ ನೀಡಿದೆ.

‘ನಮ್ಮಲ್ಲಿ 7.5 ಕೋಟಿ ಡೋಸ್‌ನಷ್ಟು ಲಸಿಕೆ ಲಭ್ಯವಿದೆ. ಜನವರಿ ಮೊದಲ ವಾರದ ವೇಳೆಗೆ 10 ಕೋಟಿ ಡೋಸ್‌ ಲಭ್ಯವಾಗಲಿದೆ’ ಎಂದು ಎಸ್‌ಐಐಯ ನಿರ್ದೇಶಕ (ಸಂಶೋಧನೆ ಮತ್ತು ಅಭಿವೃದ್ಧಿ) ಉಮೇಶ್‌ ಶಾಲಿಗ್ರಾಮ್‌ ಗುರುವಾರ ಹೇಳಿದ್ದರು.

ಅರ್ಜೆಂಟೀನಾ ಹಾಗೂ ಬ್ರಿಟನ್‌ನಲ್ಲಿ ಈ ಲಸಿಕೆಯ ಬಳಕೆಗೆ ಅನುಮತಿ ನೀಡಲಾಗಿದ್ದು ಅಲ್ಲಿ ಈಗಾಗಲೇ ಲಸಿಕಾ ಕಾರ್ಯಕ್ರಮವನ್ನೂ ಆರಂಭಿಸಲಾಗಿದೆ.

‘ಸರ್ಕಾರದೊಂದಿಗೆ ಸಹಕರಿಸಿ’
ತಜ್ಞರ ಸಮಿತಿಯು ಕೋವಿಶೀಲ್ಡ್‌ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ ಬೆನ್ನಲ್ಲೇ, ‘ಲಸಿಕೆಗಾಗಿ ನೂಕುನುಗ್ಗಲು ಸೃಷ್ಟಿಸದೆ, ಸರ್ಕಾರ ಹಾಗೂ ಅಧಿಕಾರಿಗಳ ಜತೆ ಸಹಕರಿಸಬೇಕು’ ಎಂದು ಆರ್ಗನೈಸ್ಡ್‌ ಮೆಡಿಸಿನ್‌ ಅಕಾಡೆಮಿಕ್‌ ಗಿಲ್ಡ್‌ (ಒಎಂಎಜಿ) ಜನರಲ್ಲಿ ಮನವಿ ಮಾಡಿದೆ.

‘ಲಸಿಕಾ ಕಾರ್ಯಕ್ರಮ ಪೂರ್ಣಗೊಳ್ಳಲು ಇಡೀ ವರ್ಷ ಬೇಕಾಗಬಹುದು. ಸದ್ಯಕ್ಕೆ ಹಿರಿಯ ನಾಗರಿಕರು ಮತ್ತು ಗರ್ಭಿಣಿಯಲ್ಲದ ಮಹಿಳೆಯರಿಗೆ ಮಾತ್ರ ಲಸಿಕೆ ಲಭ್ಯವಾಗಲಿದೆ’ ಎಂದು ಗಿಲ್ಡ್‌ ಅಧ್ಯಕ್ಷ ಡಾ. ಎಸ್‌. ನಟರಾಜನ್‌ ಹಾಗೂ ಮಹಾ ಕಾರ್ಯದರ್ಶಿ ಡಾ. ಈಶ್ವರ್‌ ಗಿಲಾದ ಹೇಳಿದ್ದಾರೆ.

18 ವರ್ಷದೊಳಗಿನವರ ಮೇಲೆ ಲಸಿಕೆಯ ಪರಿಣಾಮದ ಬಗ್ಗೆ ಇನ್ನೊಂದು ಸಣ್ಣ ಪ್ರಯೋಗದ ನಡೆಸಬೇಕಾಗಿದೆ. ಅದು ಪೂರ್ಣಗೊಳ್ಳುವವರೆಗೆ ಇವರು ಕಾಯಬೇಕು. ಗರ್ಭಿಣಿಯರು ಸಹ ಸ್ವಲ್ಪ ಕಾಯಬೇಕಾಗುತ್ತದೆ. ಕೋವಿಡ್‌ಗೆ ತುತ್ತಾಗಿ ಚೇತರಿಸಿಕೊಂಡವರಿಗೆ ಕೆಲವು ತಿಂಗಳ ಕಾಲ ಲಸಿಕೆಯ ಅಗತ್ಯ ಇರುವುದಿಲ್ಲ. ಆದ್ದರಿಂದ ಅಂಥವರೂ ಸ್ವಲ್ಪ ಕಾಯಬಹುದು ಎಂದು ಡಾ. ಗಿಲಾದ ಹೇಳಿದ್ದಾರೆ.

‘ಎಲ್ಲರಿಗೂ ಲಸಿಕೆ ಒದಗಿಸುವುದು ಅಸಾಧ್ಯ. ಕೋವಿಡ್‌ ಲಸಿಕೆಯು ಶೇ 70ರಷ್ಟು ಯಶಸ್ವಿಯಾಗುತ್ತದೆ ಎಂದು ಭಾವಿಸಿದರೂ, ಕೊರೊನಾ ನಿಯಂತ್ರಿಸಲು ಶೇ 70ರಷ್ಟು ಮಂದಿಗೆ ಲಸಿಕೆ ನೀಡಬೇಕಾಗುತ್ತದೆ. ಲಸಿಕೆಯ ಯಶಸ್ಸಿನ ಪ್ರಮಾಣ ಶೇ 90ರಷ್ಟಿದ್ದರೆ ದೇಶದ ಶೇ 60ರಷ್ಟು ಮಂದಿಗೆ ಲಸಿಕೆ ನೀಡಿದರೆ ಸಾಕಾಗಬಹುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.