ನವದೆಹಲಿ: ರಾಜ್ಯಗಳು ಸಾಲ ಪಡೆಯುವುದರ ಮೇಲಿನ ಮಿತಿ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ದಾಖಲಿಸಿರುವ ಅರ್ಜಿಯ ವಿಚಾರಣೆಗೆ, ಆದಷ್ಟು ಶೀಘ್ರ ಐವರು ಸದಸ್ಯರ ನ್ಯಾಯಪೀಠ ರಚಿಸಬೇಕು ಎಂದು ಕೇರಳ ಸರ್ಕಾರ ಮನವಿ ಮಾಡಿದೆ.
ಕೇಂದ್ರ ಸರ್ಕಾರ ಅಥವಾ ಇತರೆ ಮೂಲಗಳಿಂದ ಪಡೆಯುವ ಸಾಲದ ಮಿತಿಯನ್ನು ಹೆಚ್ಚಿಸಿಕೊಳ್ಳುವ ಹಕ್ಕು ರಾಜ್ಯಗಳಿಗೆ ಇದೆಯೇ ಎಂಬ ಪ್ರಶ್ನೆಯನ್ನು ಕೇರಳ ಸರ್ಕಾರ ಎತ್ತಿದೆ.
ಈ ಅರ್ಜಿಯನ್ನು ಸಂವಿಧಾನ ಪೀಠಕ್ಕೆ ಏಪ್ರಿಲ್ 1ರಂದು ಒಪ್ಪಿಸಲಾಗಿದೆ. ವಿಚಾರಣೆಗೆ ಪೀಠ ರಚಿಸುವ ಕುರಿತು ಅಧಿಕಾರಿಗಳು ಇನ್ನು ಇ–ಮೇಲ್ ಸಂದೇಶವನ್ನು ಕಳುಹಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಕೇರಳ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ತಿಳಿಸಿತು.
ಸಂವಿಧಾನ ಪೀಠ ರಚಿಸುವುದನ್ನು ಪರಿಶೀಲಿಸುತ್ತೇವೆ ಎಂದೂ ಸಿಜೆಐ ತಿಳಿಸಿದರು. ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಈ ಪೀಠದ ಇತರ ಸದಸ್ಯರಾಗಿದ್ದಾರೆ.
ಇದೇ ಸಂದರ್ಭದಲ್ಲಿ ಕೇರಳ ಸರ್ಕಾರವು ‘ಅಗತ್ಯವಿರುವಷ್ಟು ನೆರವು’ ಪಡೆದಿದೆ ಎಂದು ಅಭಿಪ್ರಾಯಪಟ್ಟ ಪೀಠವು, ಕೇರಳ ರಾಜ್ಯಕ್ಕೆ ಅನ್ವಯಿಸಿ ಮಧ್ಯಂತರ ಆದೇಶವನ್ನು ಹೊರಡಿಸಲು ನಿರಾಕರಿಸಿತು.
ರಾಜ್ಯಗಳು ಪಡೆಯಬಹುದಾದ ಸಾಲ ಕುರಿತ ಅಂಶವನ್ನು ಒಳಗೊಂಡ ಸಂವಿಧಾನದ ವಿಧಿ 293 ಅನ್ನು ಉಲ್ಲೇಖಿಸಿದ ಪೀಠವು, ‘ಇದುವರೆಗೂ ಸುಪ್ರೀಂ ಕೋರ್ಟ್ ಈ ವಿಧಿಯನ್ನು ಅಧಿಕೃತವಾಗಿ ವ್ಯಾಖ್ಯಾನ ಮಾಡಿಲ್ಲ’ ಎಂದು ಹೇಳಿತು.
‘ಉಲ್ಲೇಖಿತ ವಿಧಿ ಇದುವರೆಗೂ ವ್ಯಾಖ್ಯಾನಗೊಳ್ಳದ ಕಾರಣ, ನಮ್ಮ ಪ್ರಕಾರ ಈಗ ಅರ್ಜಿಯಲ್ಲಿ ಉಲ್ಲೇಖಿಸಲಾಗಿರುವ ಪ್ರಶ್ನೆಗಳು ಸಂವಿಧಾನದ ವಿಧಿ 145 (3) ಪರಿಧಿಗೆ ಬರುತ್ತವೆ. ಹೀಗಾಗಿ, ಇದನ್ನು ಐವರು ಸದಸ್ಯರ ಪೀಠಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.