ಮುಂಬೈ: ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಎಸ್) ಲಂಚ ಪಡೆದು ಪ್ರಮಾಣಪತ್ರ ನೀಡಿತು ಎಂದು ತಮಿಳು ನಟ ವಿಶಾಲ್ ಮಾಡಿದ್ದ ಆರೋಪದ ಕುರಿತು ಕ್ರಮ ಕೈಗೊಂಡಿರುವ ಸಿಬಿಐ, ಸಿಬಿಎಫ್‌ಎಸ್‌ನ ಕೆಲ ಅಧಿಕಾರಿಗಳು ಮತ್ತು ಇತರರ ವಿರುದ್ಧ ಲಂಚ ಪಡೆದ ಆರೋಪದ ಮೇಲೆ ಪ್ರಕರಣ ದಾಖಲಿಸಿದೆ.
ತಮ್ಮ ನಟನೆಯ ತಮಿಳು ಚಿತ್ರ ‘ಮಾರ್ಕ್ ಆ್ಯಂಟನಿ’ಯ ಹಿಂದಿ ಅವತರಣಿಕೆಯನ್ನು ಬಿಡುಗಡೆ ಮಾಡಲು ಅಗತ್ಯವಿದ್ದ ಪ್ರಮಾಣಪತ್ರ ನೀಡಲು ಸಿಬಿಎಫ್‌ಎಸ್‌ಗೆ ₹6.5 ಲಕ್ಷ ಲಂಚಕ್ಕೆ ಆಗ್ರಹಿಸಿತ್ತು. ಲಂಚ ನೀಡಿದ ಬಳಿಕವೇ ಪ್ರಮಾಣಪತ್ರವನ್ನು ನೀಡಲಾಯಿತು ಎಂದು ವಿಶಾಲ್ ಅವರು ಆರೋಪಿಸಿದ್ದ ಕೆಲ ದಿನಗಳಲ್ಲೇ ಸಿಬಿಐ ಈ ಕ್ರಮ ಕೈಗೊಂಡಿದೆ.
ವಿಶಾಲ್ ಅವರು ಆರೋಪ ಮಾಡಿದ್ದ ಬೆನ್ನಲ್ಲೇ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿತ್ತು.
‘ಪ್ರಕರಣಕ್ಕೆ ಸಂಬಂಧಿಸಿ ಮರ್ಲಿನ್ ಮೇನಗಾ, ಜೀಜಾ ರಾಮ್‌ದಾಸ್, ರಂಜನ್ ಎಂ. ಎಂಬುವರು ಮತ್ತು ಮುಂಬೈ ಸಿಬಿಎಫ್‌ಸಿಯ ಕೆಲ ಅಧಿಕಾರಿಗಳ ವಿರುದ್ಧ ಪ್ರಕರಣದ ದಾಖಲಿಸಲಾಗಿದೆ’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಅಧಿಕಾರಿಗಳ ಗುರುತು ಬಹಿರಂಗಪಡಿಸಿಲ್ಲ.
‘ಹಿಂದಿಗೆ ಡಬ್ ಮಾಡಲಾಗಿದ್ದ ಸಿನಿಮಾ ಒಂದಕ್ಕೆ ಅಗತ್ಯವಿದ್ದ ಸೆನ್ಸಾರ್ ಪ್ರಮಾಣಪತ್ರವನ್ನು ಮುಂಬೈನ ಸಿಬಿಎಫ್‌ಸಿಯಿಂದ ಒದಗಿಸಿಕೊಡಲು ₹7 ಲಕ್ಷ ಲಂಚ ಪಡೆಯಲು ಮರ್ಲಿನ್ ಎಂಬುವವರು ಇತರ ಇಬ್ಬರೊಂದಿಗೆ ಸೇರಿ ಸೆಪ್ಟೆಂಬರ್‌ನಲ್ಲಿ ಸಂಚು ರೂಪಿಸಿದ್ದರು. ಸಿಬಿಎಫ್‌ಸಿ ಅಧಿಕಾರಿಗಳ ಪರವಾಗಿ 7 ಲಕ್ಷ ಲಂಚ ನೀಡುವಂತೆ ಅವರು ದೂರುದಾರರ (ನಟ ವಿಶಾಲ್) ಎದುರು ಮೊದಲಿಗೆ ಬೇಡಿಕೆ ಇರಿಸಿದ್ದರು. ಸಂಧಾನದ ಬಳಿಕ ₹6.54 ಲಕ್ಷ ಲಂಚ ಸ್ವೀಕರಿಸಲು ಅವರು ಒಪ್ಪಿದ್ದರು ಎಂದು ಆರೋಪಿಸಲಾಗಿದೆ’ ಎಂದು ಸಿಬಿಐ ಹೇಳಿಕೆ ಹೊರಡಿಸಿದೆ.
‘ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಜೀಜಾ ಮತ್ತು ರಂಜನ್ ಅವರ ಬ್ಯಾಂಕ್ ಖಾತೆಗಳ ಮೂಲಕ ಲಂಚದ ಮೊತ್ತ ಸ್ವೀಕರಿಸಿದ ಬಳಿಕ, ಚಿತ್ರತಂಡಕ್ಕೆ ಅಗತ್ಯವಿದ್ದ ಪ್ರಮಾಣಪತ್ರವನ್ನು ಸಿಬಿಎಫ್‌ಸಿ ಸೆಪ್ಟೆಂಬರ್ 26ರಂದು ನೀಡಿದೆ’ ಎಂದು ಸಿಬಿಐ ತಿಳಿಸಿದೆ.
‘ಈ ವ್ಯವಹಾರ ಕುದುರಿಸಿದ್ದಕ್ಕಾಗಿ ಮಧ್ಯವರ್ತಿ ಮರ್ಲಿನ್, ಶುಲ್ಕದ ರೂಪದಲ್ಲಿ ತನ್ನ ಬ್ಯಾಂಕ್ ಖಾತೆಯಲ್ಲಿ ₹20,000 ಹಣ ಪಡೆದಿದ್ದಾರೆ. ಖಾಸಗಿ ಸಂಸ್ಥೆಯ ಬ್ಯಾಂಕ್ ಖಾತೆಯೊಂದರಿಂದ ಆಕೆಗೆ ಈ ಹಣ ಸಂದಾಯವಾಗಿದೆ. ಲಂಚದ ಮೊತ್ತ ₹6.54 ಲಕ್ಷದಲ್ಲಿ ₹6.50 ಲಕ್ಷವನ್ನು ಕೂಡಲೇ ನಗದು ರೂಪದಲ್ಲಿ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ’ ಎಂದು ಸಿಬಿಐ ಹೇಳಿದೆ.
ವಿಶಾಲ್ ಆರೋಪ: ‘ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು 24 ಗಂಟೆಯೊಳಗೆ ಪಡೆಯಬೇಕೆಂದರೆ ₹6.5 ಲಕ್ಷ ಲಂಚ ನೀಡಬೇಕು ಎಂದು ನಮ್ಮ ಎದುರು ಬೇಡಿಕೆ ಇಟ್ಟಿದ್ದರು. ನಮಗೆ ಬೇರೆ ದಾರಿ ಇರಲಿಲ್ಲ. ಹಾಗಾಗಿ ಲಂಚ ನೀಡಿ ಪ್ರಮಾಣಪತ್ರ ಪಡೆದುಕೊಂಡೆವು. ಚಿತ್ರ ಪ್ರದರ್ಶನಕ್ಕೆ ₹3 ಲಕ್ಷ, ಪ್ರಮಾಣಪತ್ರ ಪಡೆಯಲು ₹3.5 ಲಕ್ಷ ನೀಡಿದ್ದೇವೆ’ ಎಂದು ವಿಶಾಲ್ ಅವರು ವಿಡಿಯೊ ಮೂಲಕ ಹೇಳಿಕೆ ನೀಡಿದ್ದರು.
ಸೆಪ್ಟೆಂಬರ್ 28ರಂದು ಚಿತ್ರ ಬಿಡುಗಡೆಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.