ನವದೆಹಲಿ: ದೇಶದ 10 ರಾಜ್ಯಗಳಲ್ಲಿ 12 ಹೊಸ ಕೈಗಾರಿಕಾ ನಗರಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ತೀರ್ಮಾನಿಸಿದೆ. ಆಂತರಿಕ ಉತ್ಪಾದನೆ ಹೆಚ್ಚಿಸುವ ಗುರಿಯೊಂದಿಗೆ ಅಂದಾಜು ₹ 28,602 ಕೋಟಿ ವೆಚ್ಚದಲ್ಲಿ ಈ ನಗರಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ.
‘ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯಡಿ ₹28,602 ಕೋಟಿ ಅಂದಾಜು ವೆಚ್ಚದಲ್ಲಿ 12 ಹೊಸ ಯೋಜನೆಗಳ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
12 ನಗರಗಳ ಪೈಕಿ 2 ಆಂಧ್ರಪ್ರದೇಶ ಹಾಗೂ 1 ಬಿಹಾರದ ನಗರಗಳು ಸೇರಿವೆ.
ಒಟ್ಟು ಆರು ಕಾರಿಡಾರ್‌ಗಳಲ್ಲಿ ಈ ನಗರಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ದೇಶದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.
ಖುರ್ಪಿಯಾ (ಉತ್ತರಾಖಂಡ), ರಾಜ್‌ಪುರ–ಪಟಿಯಾಲ (ಪಂಜಾಬ್), ಡಿಘಿ (ಮಹಾರಾಷ್ಟ್ರ), ಪಾಲಕ್ಕಾಡ್ (ಕೇರಳ), ಆಗ್ರಾ, ಪ್ರಯಾಗರಾಜ್ (ಉತ್ತರ ಪ್ರದೇಶ), ಗಯಾ ಬಜಾರ್ (ಬಿಹಾರ), ಝಹಿರಾಬಾದ್ (ತೆಲಂಗಾಣ), ಓರ್ವಕಲ್, ಕೊಪ್ಪಾರ್ತಿ (ಆಂಧ್ರಪ್ರದೇಶ) ಹಾಗೂ ಜೋಧ್‌ಪುರ–ಪಾಲಿಯನ್ನು (ರಾಜಸ್ಥಾನ) ಕೈಗಾರಿಕಾ ನಗರಗಳಾಗಿ ಅಭಿವೃದ್ಧಿಪಡಿಸಲಾಗುವುದು.
ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಇವುಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ವೈಷ್ಣವ್ ತಿಳಿಸಿದರು.
ಈ ನಗರಗಳಲ್ಲಿ ಕೈಗಾರಿಕೆಗಳ ಸಮರ್ಥ ಕಾರ್ಯಾಚರಣೆಗೆ ಅತ್ಯಾಧುನಿಕ ಮೂಲಭೂತ ಸೌಕರ್ಯ ಇರಲಿದೆ. 10 ಲಕ್ಷ ನೇರ ಹಾಗೂ 30 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಠಿಯಾಗಲಿವೆ. ಈ ಯೋಜನೆಗಳು ಸುಮಾರು ₹ 1.52 ಲಕ್ಷ ಕೋಟಿ ಹೂಡಿಕೆ ಸಾಮರ್ಥ್ಯವನ್ನು ಸೃಷ್ಟಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.