ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆಯ ಸ್ಮರಣಾರ್ಥ ₹ 75 ವಿಶೇಷ ನಾಣ್ಯ ಬಿಡುಗಡೆ ಮಾಡುವುದಾಗಿ ಹಣಕಾಸು ಸಚಿವಾಲಯ ಹೇಳಿದೆ.
ನಾಣ್ಯದ ಒಂದು ಭಾಗದಲ್ಲಿ ಅಶೋಕ ಸ್ತಂಭದ ಸಿಂಹ ಲಾಂಛನ ಇರಲಿದ್ದು, ಅದರ ಕೆಳಗೆ ‘ಸತ್ಯ ಮೇವ ಜಯತೇ‘ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ‘ಭಾರತ್‘ ಎಂದು ಬರೆಯಲಾಗಿದ್ದು, ಬಲಭಾಗದಲ್ಲಿ ‘ಇಂಡಿಯಾ‘ ಎಂದು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ.
ಇನ್ನೊಂದು ಭಾಗದಲ್ಲಿ ಸಂಸತ್ ಸಂಕೀರ್ಣದ ಚಿತ್ರ ಇದ್ದು, ಮೇಲ್ಭಾಗದಲ್ಲಿ ‘ಸಂಸದ್ ಸಂಕುಲ್‘ ಎಂದು ದೇವನಾಗರಿ ಲಿಪಿಯಲ್ಲೂ, ಕೆಳಭಾಗದಲ್ಲಿ ‘ಪಾರ್ಲಿಮೆಂಟ್ ಕಾಂಪ್ಲೆಕ್ಸ್‘ ಎಂದೂ ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ.
ವೃತ್ತಾಕಾರದಲ್ಲಿರುವ ಈ ನಾಣ್ಯ 44 ಮಿಲಿ ಮೀಟರ್ ವ್ಯಾಸ ಹೊಂದಿರಲಿದೆ. 35 ಗ್ರಾಂ ತೂಕ ಇರಲಿದೆ. ಶೇ 50 ಬೆಳ್ಳಿ, ಶೇ 40 ತಾಮ್ರ, ಶೇ 5 ಬಿಳಿಲೋಹ, ಹಾಗೂ ಶೇ 5 ರಷ್ಟು ಸತು ಬಳಸಿ ಈ ನಾಣ್ಯವನ್ನು ತಯಾರಿಸಲಾಗಿದೆ.
ಮೇ 28ರ ಭಾನುವಾರ ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.