ನವದೆಹಲಿ: ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯ ಬಗ್ಗೆ ನಿರ್ಧರಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಭಾನುವಾರ ಉನ್ನತ ಮಟ್ಟದ ಸಭೆ ನಡೆಸಲಾಗುತ್ತಿದೆ. ದೇಶದಲ್ಲಿ ಕೋವಿಡ್–19 ಪ್ರಕರಣಗಳು ಏರುಗತಿಯಲ್ಲಿದ್ದ ಕಾರಣ ಏಪ್ರಿಲ್ 14ರಂದು ಶಿಕ್ಷಣ ಸಚಿವಾಲಯವು 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು.
12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು ಹಾಗೂ ಜೂನ್ 1ರ ಬಳಿಕ ಪರಿಸ್ಥಿತಿಯ ಅವಲೋಕನ ನಡೆಸಿ ನಿರ್ಧರಿಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿತ್ತು. ಇಂದು ನಡೆಯುವ ಸಭೆಯಲ್ಲಿ ಕೇಂದ್ರ ಸಚಿವರಾದ ರಮೇಶ್ ಪೋಖ್ರಿಯಾಲ್, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್, ರಾಜ್ಯಗಳ ಶಿಕ್ಷಣ ಸಚಿವರು ಹಾಗೂ ಕಾರ್ಯದರ್ಶಿಗಳು ಭಾಗಿಯಾಗಲಿದ್ದಾರೆ.
ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳಿಂದ ರಮೇಶ್ ಪೋಖ್ರಿಯಾಲ್ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡುವಂತೆ ಶನಿವಾರ ಸಾಮಾಜಿಕ ಮಾಧ್ಯಮದ ಮೂಲಕ ಕೇಳಿದ್ದರು.
ಹನ್ನೆರಡನೇ ತರಗತಿಯ ಪ್ರಮುಖ ವಿಷಯಗಳಿಗೆ ಮಾತ್ರವೇ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಕೇಂದ್ರವು ರಾಜ್ಯಗಳೊಂದಿಗೆ ಪ್ರಸ್ತಾಪಿಸಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ಒಟ್ಟು 174 ವಿಷಯಗಳ ಪೈಕಿ 20 ವಿಷಯಗಳನ್ನು ಸಿಬಿಎಸ್‌ಇ ಪ್ರಮುಖ ವಿಷಯಗಳಾಗಿ ಪರಿಗಣಿಸಿದೆ. ಅದರಲ್ಲಿ ವಿದ್ಯಾರ್ಥಿಗಳು ಕನಿಷ್ಠ ಐದು ಮತ್ತು ಗರಿಷ್ಠ 6 ವಿಷಯಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಅವುಗಳ ಪೈಕಿ 4 ವಿಷಯಗಳನ್ನು ಪ್ರಮುಖ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ– ಸಿಬಿಎಸ್‌ಇ: ಜೂ. 20ರೊಳಗೆ 10ನೇ ತರಗತಿ ಫಲಿತಾಂಶ
ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಬಹುತೇಕರು ಪರೀಕ್ಷೆ ರದ್ದು ಪಡಿಸುವಂತೆ ಕೇಳುತ್ತಿದ್ದರೆ, ಶಾಲಾ ಪ್ರಾಂಶುಪಾಲರ ಪೈಕಿ ಭಿನ್ನ ನಿಲುವು ವ್ಯಕ್ತವಾಗಿದೆ. ಜೆಇಇ ರೀತಿಯ ಆನ್‌ಲೈನ್ ಪರೀಕ್ಷೆಗಳನ್ನು ನಡೆಸುವುದು, ಶಾಲೆಗಳ ಮಟ್ಟದಲ್ಲಿಯೇ ಪರೀಕ್ಷೆ ನಡೆಸುವುದು, ಬಹು ಆಯ್ಕೆ ಮಾದರಿಗಳ ಪರೀಕ್ಷೆಗಳನ್ನು ನಡೆಸುವುದು ಸೇರಿದಂತೆ ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ.
ಫೆಬ್ರುವರಿ–ಮಾರ್ಚ್‌ನಲ್ಲಿ ನಡೆಯಬೇಕಿದ್ದ ಬೋರ್ಡ್ ಪರೀಕ್ಷೆಗಳನ್ನು ಮೇ 4ಕ್ಕೆ ಮುಂದೂಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.