ನವದೆಹಲಿ: ರೈತರ ಆದಾಯವನ್ನು ಹೆಚ್ಚಿಸಲು ನೆರವಾಗುವ ಮೂರು ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಲು ಕೇಂದ್ರ ಸಚಿವ ಸಂಪುಟವು ಬುಧವಾರ ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕಾಯ್ದೆಗಳಿಂದ ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಸಾಧ್ಯವಾಗಲಿದ್ದು, ರೈತರ ಆದಾಯ ಹೆಚ್ಚಲಿದೆ ಎಂದು ಸರ್ಕಾರ ಹೇಳಿದೆ.
ಆರೂವರೆ ದಶಕ ಹಳೆಯದಾದ ಅಗತ್ಯವಸ್ತು ಕಾಯ್ದೆಗೆ (ಇಸಿ ಆ್ಯಕ್ಟ್) ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಈ ತಿದ್ದುಪಡಿಯಿಂದ ಧಾನ್ಯಗಳು, ಸಿರಿಧಾನ್ಯ, ಎಣ್ಣೆಕಾಳು, ಈರುಳ್ಳಿ, ಆಲೂಗಡ್ಡೆ ಸೇರಿದಂತೆ ಆರು ಅಗತ್ಯ ವಸ್ತುಗಳು ನಿಯಂತ್ರಣದಿಂದ ಮುಕ್ತವಾಗಲಿವೆ.
ಬೆಲೆ ದಿಢೀರ್ ಏರಿಕೆಯಾದಾಗ ಅಥವಾ ಉತ್ಪಾದನೆ ಕುಸಿತ ಕಂಡಾಗ, ಸರ್ಕಾರವು ಕೆಲವು ಉತ್ಪನ್ನಗಳ ಸಂಗ್ರಹದ ಮೇಲೆ ಮಿತಿ ಹೇರುತ್ತದೆ. ದೇಶದಲ್ಲಿ ಹೆಚ್ಚುವರಿ ಉತ್ಪಾದನೆ ಆಗುತ್ತಿದ್ದು, ಆರು ಉತ್ಪನ್ನಗಳ ಮೇಲಿನ ನಿರ್ಬಂಧ ತೆಗೆದುಹಾಕಲಾಗಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
‘ಕೃಷಿ ಉತ್ಪನ್ನ ಮಾರಾಟ (ಉತ್ತೇಜನ ಮತ್ತು ನೆರವು)–2020’ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ನಿರ್ಧರಿಸಿದೆ. ಈ ಸುಗ್ರೀವಾಜ್ಞೆಯಿಂದ ರೈತರು ತಮ್ಮ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಬಹುದು. ಚಿಲ್ಲರೆ ಮಾರಾಟದ ಕಂಪನಿಗಳು, ಆಹಾರ ಸಂಸ್ಕರಣೆ ಘಟಕಗಳು, ಚಿಲ್ಲರೆ ಮಾರಾಟ ಜಾಲಗಳು ಮೊದಲಾದ ಸಗಟು ಖರೀದಿದಾರರಿಗೆ ನೇರವಾಗಿ ಮಾರಾಟ ಮಾಡಬಹುದು.
‘ಭಾರತದ 7 ಸಾವಿರಕ್ಕೂ ಹೆಚ್ಚು ಸಗಟು ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಹಾಗೂ ರೈತರ ಜಮೀನಿನಲ್ಲಿಯೇ ಫಸಲು ಖರೀದಿಸಲು ಇದರಿಂದ ಸಾಧ್ಯವಾಗಲಿದೆ. ರಾಜ್ಯದೊಳಗೆ, ಬೇರೆ ರಾಜ್ಯಗಳಲ್ಲಿ ಅಡ್ಡಿ ಇಲ್ಲದಂತೆ ವ್ಯಾಪಾರ ಮಾಡಬಹುದು’ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
‘ರೈತರಿಗೆ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಖಾತರಿ ಹಾಗೂ ಕೃಷಿ ಸೇವೆಗಳ ಒಪ್ಪಂದ ಸುಗ್ರೀವಾಜ್ಞೆ’ಯು ಸಂಸ್ಕರಣೆ, ದೊಡ್ಡ ಪ್ರಮಾಣದ ಚಿಲ್ಲರೆ ವ್ಯಾಪಾರ, ರಫ್ತು ಕೆಲಸಗಳಲ್ಲಿ ತೊಡಗಿಕೊಳ್ಳುವ ರೈತರ ಸಬಲೀಕರಣಕ್ಕೆನೆರವಾಗಲಿದೆ’ ಎಂದು ಸಚಿವರು ತಿಳಿಸಿದ್ದಾರೆ.
ಈ ಪ್ರಸ್ತಾವಗಳು ಕೇಂದ್ರ ಸರ್ಕಾರ ಘೋಷಿಸಿದ್ದ ₹ 20 ಲಕ್ಷ ಕೋಟಿ ಪ್ಯಾಕೇಜ್‌ನ ಭಾಗವಾಗಿವೆ.
ಗ್ರಾಮ ಭಾರತಕ್ಕೆ ಅನುಕೂಲ: ಮೋದಿ
ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಖರೀದಿ ಮೇಲಿನ ನಿರ್ಬಂಧ ತೆಗೆದು ಹಾಕಿದ ಕೇಂದ್ರ ಸಂಪುಟದ ನಿರ್ಧಾರವು ರೈತರ ದಶಕಗಳಷ್ಟು ಹಳೆಯದಾದ ಬೇಡಿಕೆಯನ್ನು ಈಡೇರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಸಂಪುಟದ ಈ ನಿರ್ಧಾರ ಗ್ರಾಮ ಭಾರತದಲ್ಲಿ ಸಕಾರಾತ್ಮಕ ಬದಲಾವಣೆ ತರಲಿವೆ. ಉದ್ಯಮಶೀಲ ರೈತರಿಗೆ ಹೆಚ್ಚು ನೆರವಾಗಲಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.ಕೃಷಿ ಉತ್ಪನ್ನ ಮಾರಾಟ ಸುಗ್ರೀವಾಜ್ಞೆಯು ‘ಏಕ ಭಾರತ, ಏಕ ಕೃಷಿ ಮಾರುಕಟ್ಟೆ’ ಸೃಷ್ಟಿಗೆ ದಾರಿ ಮಾಡಿಕೊಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಪುಟದ ಇತರೆ ನಿರ್ಧಾರಗಳು
* ಕೋಲ್ಕತ್ತ ಬಂದರಿಗೆ ಜನಸಂಘ ಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿ ಹೆಸರು ಇರಿಸಲು ಒಪ್ಪಿಗೆ
* ಹೂಡಿಕೆ ಆಕರ್ಷಿಸಲು ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ಹಾಗೂ ಯೋಜನೆ ಅಭಿವೃದ್ಧಿ ಘಟಕ (ಪಿಡಿಸಿ) ಸ್ಥಾಪನೆಗೆ ನಿರ್ಧಾರ
* ಫಾರ್ಮಾಕೊಪೊಯಿಯಾ ಕಮಿಷನ್ ಫಾರ್ ಇಂಡಿಯನ್ ಮೆಡಿಸಿನ್ ಮತ್ತು ಹೋಮಿಯೋಪಥಿಯ ಎರಡು ಪ್ರಯೋಗಾಲಯಗಳ ವಿಲೀನಕ್ಕೆ ಅನುಮೋದನೆ
* ದಿವಾಳಿ ಕಾನೂನಿಗೆ (ಐಬಿಸಿ) ತಿದ್ದುಪಡಿ ತರಲು ನಿರ್ಧಾರ
**
ಅಗತ್ಯ ಸರಕುಗಳ ಕಾಯ್ದೆಯ ಪ್ರಸ್ತಾವಿತ ತಿದ್ದುಪಡಿಯು ಖಾಸಗಿ ಹೂಡಿಕೆದಾರರ ಅತಿಯಾದ ಹಸ್ತಕ್ಷೇಪದ ಆತಂಕಗಳನ್ನು ನಿವಾರಿಸುತ್ತದೆ.
-ನರೇಂದ್ರ ಸಿಂಗ್ ತೋಮರ್, ಕೃಷಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.