ADVERTISEMENT

ಅವಿಶ್ವಾಸ ಚರ್ಚೆ| ಕಾಂಗ್ರೆಸ್ ವಿರುದ್ಧ ವಾಗ್ದಾಳಿಯೇ ಕಾರ್ಯಸೂಚಿ: ಸರ್ಕಾರ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 16:09 IST
Last Updated 8 ಆಗಸ್ಟ್ 2023, 16:09 IST
ಲೋಕಸಭೆ ಕಲಾಪ
ಲೋಕಸಭೆ ಕಲಾಪ   

ನವದೆಹಲಿ: ವಿರೋಧಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಮಂಗಳವಾರ ಚರ್ಚೆಯನ್ನು ಆರಂಭಿಸಿದ ಆಡಳಿತಪಕ್ಷದ ಸದಸ್ಯರು ಕಾಂಗ್ರೆಸ್‌ ಪಕ್ಷದ ನಾಯಕತ್ವವನ್ನೇ ಪ್ರಮುಖವಾಗಿ ಗುರಿಯಾಗಿಸಿ ತೀವ್ರ ವಾಗ್ದಾಳಿ ನಡೆಸಿದರು.

ಬೆಳಿಗ್ಗೆ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಅವರು, ‘2024ರ ಲೋಕಸಭೆ ಚುನಾವಣೆಗೂ ಮೊದಲು ‘ಸಿಕ್ಸರ್’ ಬಾರಿಸಬೇಕು’ ಎಂದು ಕರೆ ನೀಡಿದ್ದರು. ಇದರಿಂದ ಪ್ರೇರೇಪಿತರಾದಂತೆ ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ವಾಕ್ಸಮರಕ್ಕಿಳಿದರು.

ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಅವರು, ‘ವಂಶಾಡಳಿತ ರಾಜಕಾರಣವನ್ನು ರಕ್ಷಿಸಲು ಹಾಗೂ ಭ್ರಷ್ಟಾಚಾರದ ಆರೋಪಗಳಿಂದ ಮುಕ್ತವಾಗಲು ‘ಇಂಡಿಯಾ’ದ ಮೈತ್ರಿಪಕ್ಷಗಳು ಈಗ ಒಟ್ಟಾಗಿವೆ’ ಎಂದು ಆರೋಪಿಸಿದ್ದರು.

ADVERTISEMENT

ಕಾಂಗ್ರೆಸ್‌ ಪಕ್ಷದ ಗೌರವ್‌ ಗೊಗೋಯಿ ನಿರ್ಣಯ ಕುರಿತು ಚರ್ಚೆಯನ್ನು ಆರಂಭಿಸಿದರು. ಬಳಿಕ ಆಡಳಿತ ಪಕ್ಷದ ಪರವಾಗಿ ಮೊದಲಿಗೆ ಮಾತನಾಡಿದ ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ, ನೇರವಾಗಿ ಸೋನಿಯಾಗಾಂಧಿ ಅವರನ್ನೇ ಟೀಕಿಸಿದರು.  

ಈ ಅವಿಶ್ವಾಸ ನಿರ್ಣಯವನ್ನು ‘ಬಡಜನರಿಗಾಗಿ ಕೆಲಸ ಮಾಡುತ್ತಿರುವ ಬಡವರ ಮಗನ ವಿರುದ್ಧ ತರಲಾಗಿದೆ’ ಎಂದರು. ‘ಸೋನಿಯಾ ಗಾಂಧಿ ಅವರಿಗೆ ಭಾರತೀಯ ನಾರಿಗಿರುವ ಎಲ್ಲ ಗುಣಲಕ್ಷಣಗಳು ಇವೆ. ಇದನ್ನೇ ಗಮನದಲ್ಲಿಟ್ಟು ಹೇಳುವುದಾದರೆ, ಅವರಿಗೆ ತಮ್ಮ ಮಗನಿಗೆ ರಾಜಕೀಯ ನೆಲೆ ಒದಗಿಸುವುದು, ಅಳಿಯನಿಗೆ ಕೊಡುಗೆ ನೀಡುವುದೇ ಅದ್ಯತೆಯಾಗಿದೆ‘ ಎಂದು ವ್ಯಂಗ್ಯವಾಡಿದರು.

ಆಡಳಿತ ಪಕ್ಷದ ಸದಸ್ಯರ ಭಾಷಣದಲ್ಲಿ ಪ್ರಮುಖವಾಗಿ ‘ಇಂಡಿಯಾ’ ಮೈತ್ರಿಪಕ್ಷಗಳ ಮುಖಂಡರ ಸ್ವಜನಪಕ್ಷಪಾತ, ಭ್ರಷ್ಟಾಚಾರದ ಉಲ್ಲೇಖವಿತ್ತು. ಕೇಂದ್ರ ಸಚಿವರಲ್ಲದೇ ನಾರಾಯಣ ರಾಣೆ, ಸುನಿತಾ ದುಗ್ಗಲ್ ಹಾಗೂ ಎನ್‌ಡಿಎ ಮೈತ್ರಿಪಕ್ಷಗಳಾದ ಶಿವಸೇನೆಯ (ಶಿಂದೆ ಬಣ) ಶ್ರೀಕಾಂತ್‌ ಶಿಂದೆ, ಪಕ್ಷೇತರ ಸದಸ್ಯ ನವನೀತ್ ರಾಣಾ ಅವರೂ ಮಾತನಾಡಿದರು. ನಿರ್ಣಯದ ಮೇಲೆ ಮಾತನಾಡಲು ಎನ್‌ಡಿಎ ಪಕ್ಷಗಳ 15 ಸದಸ್ಯರಿಗೆ ಅವಕಾಶವಿದ್ದು, ಆರು ಗಂಟೆ ಅವಧಿಯನ್ನು ಮೀಸಲಿರಿಸಲಾಗಿದೆ.

ಎನ್‌ಡಿಎಯ ಮುಖ್ಯ ಭಾಷಣಕಾರ ಬಿಜೆಪಿಯ ಕಿರಣ್ ರಿಜಿಜು ಅವರು, ‘ಈಶಾನ್ಯ ವಲಯದಲ್ಲಿ ಕಳೆದ 9 ವರ್ಷಗಳಲ್ಲಿ ಬಂಡುಕೋರರ ಪ್ರಾಬಲ್ಯ ಗಣನೀಯವಾಗಿ ಕುಗ್ಗಿದೆ. 8000 ಬಂಡುಕೋರ ಸಂಘಟನೆಗಳು ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿವೆ’ ಎಂದರು.

‘ಬಂಡುಕೋರರ ಶರಣಾಗತಿಯ ಪ್ರಮಾಣ ಶೇ 800ರಷ್ಟು ಹೆಚ್ಚಿದೆ. ಆಪ್‌ಸ್ಪಾ ಕಾಯ್ದೆ ವ್ಯಾಪ್ತಿಯು ಶೇ 75ರಷ್ಟು ಕುಗ್ಗಿದೆ. ಈಗ ಅವಿಶ್ವಾಸ ನಿರ್ಣಯ ತಂದದ್ದಕ್ಕಾಗಿ ಪ್ರತಿಪಕ್ಷಗಳು ವಿಷಾದ ಪಡಲಿವೆ’ ಎಂದು ಅವರು ಅಭಿಪ್ರಾಯಪಟ್ಟರು. 

ಬಿಜೆಪಿಯ ಸುನಿತಾ ದುಗ್ಗಲ್‌, ‘ಕಾಂಗ್ರೆಸ್‌ ಪಕ್ಷ ಪರಿಶಿಷ್ಟ ಜಾತಿ, ಪಂಗಡ ಸಮುದಾಯದ ಅಭಿವೃದ್ಧಿಗೆ ವಿರುದ್ಧವಾಗಿದೆ. 2004ರಲ್ಲಿ ಈ ವರ್ಗಗಳಿಂದ ಬಿಜೆಪಿಯ 48, ಕಾಂಗ್ರೆಸ್‌ನ 29 ಸದಸ್ಯರಿದ್ದರು. 2014ರಲ್ಲಿ ಈ ಸಂಖ್ಯೆಯು ಕ್ರಮವಾಗಿ 48 ಹಾಗೂ 12 ಇತ್ತು. ಈಗಿನ ಲೋಕಸಭೆಯಲ್ಲಿ ಈ ಸಮುದಾಯಕ್ಕೆ ಸೇರಿದ ಬಿಜೆಪಿಯ 66 ಸದಸ್ಯರಿದ್ದರೆ, ಕಾಂಗ್ರೆಸ್‌ನ 10 ಸದಸ್ಯರಿದ್ದಾರೆ’ ಎಂದರು.

ಪಕ್ಷೇತರ ಸದಸ್ಯ ನವನೀತ್‌ ರಾಣಾ ಅವರು, ‘ಮಣಿಪುರದ ಹಿಂಸಾಚಾರದ ವಿಡಿಯೊ ಬಿಡುಗಡೆಯಾದ ಸಮಯ ಕುರಿತು ‘ಇಂಡಿಯಾ’ ಮೈತ್ರಿಕೂಟದ ಯಾವೊಬ್ಬ ಸದಸ್ಯರು ಪ್ರಶ್ನಿಸಲಿಲ್ಲ. ಹಿಂಸಾಚಾರ ಖಂಡನೀಯ. ಆದರೆ, ಜುಲೈ 4ರಂದು ನಡೆದಿದ್ದ ಕೃತ್ಯದ ವಿಡಿಯೊ ಅನ್ನು ಉದ್ದೇಶಪೂರ್ವಕವಾಗಿ ಅಧಿವೇಶನಕ್ಕೆ ಮೊದಲು ಜಾಲತಾಣದಲ್ಲಿ ಹಂಚಿಕೆಯಾಗುವಂತೆ ನೋಡಿಕೊಳ್ಳಲಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.