ನವದೆಹಲಿ: ಕರ್ನಾಟಕದ ಮಂಡ್ಯ ಜಿಲ್ಲೆಯ ಮರಳಗಾಲ– ಅಲ್ಲಾಪಟ್ಟಣ ಪ್ರದೇಶದಲ್ಲಿ 1,600 ಟನ್‌ಗಳಷ್ಟು ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅಣು ಶಕ್ತಿ ಇಲಾಖೆಯ (ಡಿಎಇ) ಘಟಕವಾಗಿರುವ ಪರಮಾಣು ಖನಿಜಗಳ ನಿರ್ದೇಶನಾಲಯದ ಪರಿಶೋಧನೆ ಮತ್ತು ಸಂಶೋಧನೆ (ಎಎಂಡಿ) ತಂಡ ಈ ಬಗ್ಗೆ ಪ್ರಾಥಮಿಕ ಸಮೀಕ್ಷೆ ನಡೆಸಿದೆ ಎಂದು ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಸಂಸದ ಜಿ.ಎಸ್. ಬಸವರಾಜ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ಎಎಂಡಿ ಸದ್ಯಕ್ಕೆ ಮರಳಗಾಲ–ಅಲ್ಲಾಪಟ್ಟಣ ಪ್ರದೇಶದಲ್ಲಿ ಮೂರು ಹಂತಗಳ ಪರಿಶೋಧನೆ ಕಾರ್ಯ ಕೈಗೊಂಡಿದೆ. ಈ ಕಾರ್ಯ ಸಂಪೂರ್ಣ ಮುಕ್ತಾಯವಾದ ಮೇಲೆಯೇ ಅಲ್ಲಿನ ಲಿಥಿಯಂ ಗುಣಮಟ್ಟದ ಮಹತ್ವ ಮತ್ತು ಪ್ರಮಾಣವು ಮತ್ತಷ್ಟು ನಿಖರವಾಗಿ ತಿಳಿಯಲಿದೆ. ಜತೆಗೆ, ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲಿನ ಲಿಥಿಯಂ ಹೊರತೆಗೆಯುವ ಕಾರ್ಯದ ಕುರಿತು ತಾಂತ್ರಿಕ, ಸಾಮಾಜಿಕ ಮತ್ತು ಆರ್ಥಿಕ ಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಲಿಥಿಯಂ ಪತ್ತೆಗಾಗಿ ರಾಜಸ್ಥಾನದ ಜೋಧಪುರ ಮತ್ತು ಬರ್ಮೆರ್ ಜಿಲ್ಲೆಗಳಲ್ಲಿ ಸರಸ್ವತಿ ನದಿಯ ಬಳಿಯೂ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಆಧುನಿಕ ತಂತ್ರಜ್ಞಾನದಲ್ಲಿ ಲಿಥಿಯಂ ಲೋಹವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಸೆರಾಮಿಕ್ಸ್, ಗ್ಲಾಸ್, ದೂರಸಂಪರ್ಕ ಮತ್ತು ಏರೋಸ್ಪೇಸ್ ಉದ್ಯಮದಲ್ಲಿ ಇದನ್ನು ಬಳಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಲಿಥಿಯಂ ಅಯಾನ್ ಬ್ಯಾಟರಿಗಳಲ್ಲಿ, ಮೊಬೈಲ್ ದೂರವಾಣಿಗಳಲ್ಲಿ ಸೇರಿದಂತೆ ಹಲವು ಉಪಕರಣಗಳಲ್ಲಿಯೂ ಬಳಸಲಾಗುತ್ತಿದೆ. ಲಿಥಿಯಂ ಅಯಾನ್ ಬ್ಯಾಟರಿಗಳಿಗೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚಿದೆ. ಹೀಗಾಗಿ, ಲಿಥಿಯಂ ಬೇಡಿಕೆಯೂ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.