ADVERTISEMENT

ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಪಠ್ಯ ಕೈಬಿಟ್ಟಿಲ್ಲ: ಕೇಂದ್ರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 5:06 IST
Last Updated 26 ಜುಲೈ 2022, 5:06 IST
ಭಗತ್‌ ಸಿಂಗ್
ಭಗತ್‌ ಸಿಂಗ್   

ನವದೆಹಲಿ: ‘ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್ ಅವರಿಗೆ ಸಂಬಂಧಿಸಿದ ಪಠ್ಯಗಳನ್ನು ಕರ್ನಾಟಕ ಸರ್ಕಾರವು ಯಾವುದೇ ತರಗತಿಯ ಪಠ್ಯಪುಸ್ತಕದಿಂದ ಕೈಬಿಟ್ಟಿಲ್ಲ’ ಎಂದು ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವರಾದ ಅನ್ನಪೂರ್ಣ ದೇವಿ ಸ್ಪಷ್ಟಪಡಿಸಿದ್ದಾರೆ.

ಲೋಕಸಭೆಯಲ್ಲಿ ಸದಸ್ಯ ಕೋಡಿಕುನ್ನಿಲ್‌ ಸುರೇಶ್‌ ಅವರ ಪ್ರಶ್ನೆಗೆ ಸೋಮವಾರ ಲಿಖಿತ ಉತ್ತರ ನೀಡಿರುವ ಅವರು, ‘2022-23ನೇ ಶೈಕ್ಷಣಿಕ ವರ್ಷದಲ್ಲಿ 6ರಿಂದ 10 ನೇ ತರಗತಿಯ ಸಮಾಜ ವಿಜ್ಞಾನ ಹಾಗೂ 1 ರಿಂದ 10 ನೇ ತರಗತಿಯವರೆಗಿನ ಕನ್ನಡ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗಿದೆ. ಸದ್ಯ ಸರ್ಕಾರದ ಪಠ್ಯಕ್ರಮದ ಪುಸ್ತಕಗಳಲ್ಲಿ 7 ಹಾಗೂ 10ನೇ ತರಗತಿಯ ಪುಸ್ತಕಗಳಲ್ಲಿ ಭಗತ್ ಸಿಂಗ್ ಕುರಿತ ಅಂಶಗಳಿವೆ’ ಎಂದು ಅವರು ತಿಳಿಸಿದ್ದಾರೆ.

‘ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಪ್ಯಾರಾ 4.30 ರ ಅನ್ವಯ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು ಶಾಲಾ ಶಿಕ್ಷಣಕ್ಕಾಗಿ ಹೊಸ ಮತ್ತು ಸಮಗ್ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅನ್ನು ರೂಪಿಸಲಿದೆ. ಇದಕ್ಕಾಗಿ ಅದು ಎನ್ಇಪಿಯ ಸಿದ್ಧಾಂತಗಳನ್ನು ಆಧರಿಸಲಿದ್ದು, ಎಲ್ಲ ಪಾಲುದಾರರೊಂದಿಗೆ ಚರ್ಚಿಸಿದ ನಂತರ ಪಠ್ಯಕ್ರಮದ ಬದಲಾವಣೆ ಕುರಿತು ನಿರ್ಧರಿಸಲಿದೆ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.