ADVERTISEMENT

ಕೇಂದ್ರದಿಂದ ‘ಯುದ್ಧ’ ಘೋಷಣೆ: ಟಿಎಂಸಿ ಆರೋಪ

ಪಿಟಿಐ
Published 7 ಫೆಬ್ರುವರಿ 2024, 14:26 IST
Last Updated 7 ಫೆಬ್ರುವರಿ 2024, 14:26 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

(ಪಿಟಿಐ ಚಿತ್ರ)

ಕೋಲ್ಕತ್ತ: ‘ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ವಿರುದ್ಧ ಎಲ್ಲ ಕ್ಷೇತ್ರಗಳಲ್ಲೂ ಯುದ್ಧ ಘೋಷಿಸಿದೆ’ ಎಂದು ತೃಣಮೂಲ ಕಾಂಗ್ರೆಸ್‌ ಪಕ್ಷ (ಟಿಎಂಸಿ) ಆರೋಪಿಸಿದೆ.

ADVERTISEMENT

‘ನರೇಗಾ, ವಸತಿ (ಆವಾಸ್‌) ಯೋಜನೆ, ಗ್ರಾಮೀಣ ರಸ್ತೆ (ಗ್ರಾಮ ಸಡಕ್‌) ಯೋಜನೆಗಳಿಗೆ ಅನುದಾನ ತಡೆಹಿಡಿದಿರುವ ಕೇಂದ್ರ ಸರ್ಕಾರವು ಇದೀಗ ಸರ್ವ ಶಿಕ್ಷಾ ಅಭಿಯಾನದ ಅನುದಾನವನ್ನೂ ಸ್ಥಗಿತಗೊಳಿಸಿದೆ’ ಎಂದು ಟಿಎಂಸಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ.

‘ಪಶ್ಚಿಮ ಬಂಗಾಳಕ್ಕೆ ಸರ್ವ ಶಿಕ್ಷಾ ಅಭಿಯಾನದಡಿ ಬರಬೇಕಾದ ಅನುದಾನ ₹ 1,754 ಕೋಟಿ. ಆದರೆ ಕೇವಲ ₹ 311 ಕೋಟಿ ಬಿಡುಗಡೆಯಾಗಿದೆ’ ಎಂದು ಅದು ತಿಳಿಸಿದೆ.

ಇದನ್ನು ‘ಹಣಕಾಸಿನ ಭಯೋತ್ಪಾದನೆ’ ಎಂದು ಕರೆದಿರುವ ಟಿಎಂಸಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ. ಅಲ್ಲದೆ ತನ್ನ ಪೋಸ್ಟ್‌ನಲ್ಲಿ ಮಾಧ್ಯಮ ವರದಿಯೊಂದರ ಲಿಂಕ್‌ ಅನ್ನು ನಮೂದಿಸಿದೆ.

ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಹಣವನ್ನು ಸ್ಥಗಿತಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕೋಲ್ಕತ್ತದಲ್ಲಿ ಇದೇ 13ರವರೆಗೆ ಧರಣಿ ಮುಂದುವರಿಯುತ್ತದೆ. ಅಗತ್ಯವಿದ್ದರೆ ಆ ಬಳಿಕವೂ ಮುಂದುವರಿಯಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದರು.

‘ನನಗೆ ಶೀತ ಮತ್ತು ಜ್ವರ ಇದೆ. ಆರೋಗ್ಯ ಸುಧಾರಣೆ ಆಗುವ ನಿರೀಕ್ಷೆಯಿದ್ದು, ಗುರುವಾರ ಬಜೆಟ್‌ ಮಂಡನೆ ವೇಳೆ ಅಧಿವೇಶನದಲ್ಲಿ ಹಾಜರಿರುವುದಾಗಿ’ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.