ನವದೆಹಲಿ: ಸಂಸತ್ ಅಧಿವೇಶನವನ್ನು ಉದ್ದೇಶಿಸಿ ಶುಕ್ರವಾರ ರಾಷ್ಟ್ರಪತಿಯವರು ಮಾಡಿದ ಭಾಷಣಕ್ಕೆ ಗೈರಾಗಿರುವ ಪ್ರತಿಪಕ್ಷಗಳ ವಿರುದ್ಧ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿರುವ ಅವರು, 'ಇಂದಿನ ಬಜೆಟ್ ಅಧಿವೇಶನವು ಅಧ್ಯಕ್ಷರ ಭಾಷಣದೊಂದಿಗೆ ಪ್ರಾರಂಭವಾಯಿತು. ಆದರೆ, ಪ್ರತಿಪಕ್ಷಗಳು ರಾಷ್ಟ್ರಪತಿಯವರ ಭಾಷಣವನ್ನು ಬಹಿಷ್ಕರಿಸಿದ್ದು ನಿಜಕ್ಕೂ ದುರದೃಷ್ಟಕರ' ಎಂದು ತಿಳಿಸಿದ್ದಾರೆ.
'ನಮ್ಮ ರಾಜಕೀಯ ಬಿನ್ನಾಭಿಪ್ರಾಯಗಳಿಗಿಂತ ರಾಷ್ಟ್ರಪತಿ ಮೇಲಿನವರಾಗಿದ್ದಾರೆ. ಅವರು ಸಾಂವಿಧಾನಿಕ ಮುಖ್ಯಸ್ಥರು. ಅವರನ್ನು ಗೌರವಿಸುವುದು ಆರೋಗ್ಯಕರ ಪ್ರಜಾಪ್ರಭುತ್ವದ ರೂಢಿಯಾಗಿದೆ. ದುರದೃಷ್ಟಕರ ವಿಚಾರವೆಂದರೆ, ಈ ದೇಶದಲ್ಲಿ 50 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ರಾಷ್ಟ್ರಪತಿ ಅವರ ಭಾಷಣವನ್ನು ಬಹಿಷ್ಕರಿಸಿದೆ. ಅವರು ಯಾವ ರೀತಿಯ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ' ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಮಾಡಲಿರುವ ಭಾಷಣವನ್ನು ಬಹಿಷ್ಕರಿಸಲು ಕಾಂಗ್ರೆಸ್, ಎನ್‌ಸಿಪಿ, ಶಿವಸೇನಾ, ಟಿಎಂಸಿ, ಬಿಎಸ್‌ಪಿ ಸೇರಿ 16 ವಿರೋಧ ಪಕ್ಷಗಳು ನಿರ್ಧರಿಸಿದ್ದವು. ಭಾಷಣವನ್ನು ಬಹಿಷ್ಕರಿಸುವುದಾಗಿ ಆಮ್ ಅದ್ಮಿ ಪಕ್ಷವು ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿತ್ತು.
ಕೇಂದ್ರದ ಆಡಳಿತಾರೂಢ ಮೈತ್ರಿಕೂಟ ಎನ್‌ಡಿಎಯ ಭಾಗವಾಗಿದ್ದ ಶಿರೋಮಣಿ ಅಕಾಲಿ ದಳ ಕೂಡ ಇಂತಹುದೇ ನಿರ್ಧಾರ ಕೈಗೊಂಡಿತ್ತು. ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಈ ಕ್ರಮ ಎಂದು ವಿರೋಧ ಪಕ್ಷಗಳು ಹೇಳಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.