ADVERTISEMENT

ಕೇಂದ್ರ ಸಚಿವ ರಾಣೆಗೆ ಮಂಗಳವಾರ ತಡರಾತ್ರಿ ಜಾಮೀನು

ಉದ್ಧವ್‌ ಕೆನ್ನೆಗೆ ಬಾರಿಸುತ್ತೇನೆ ಎಂದಿದ್ದ ರಾಣೆ l 20 ವರ್ಷದಲ್ಲಿ ಸಚಿವರ ಸೆರೆ ಇದೇ ಮೊದಲು

ಪಿಟಿಐ
Published 24 ಆಗಸ್ಟ್ 2021, 20:19 IST
Last Updated 24 ಆಗಸ್ಟ್ 2021, 20:19 IST
ಕೇಂದ್ರ ಸಚಿವ ನಾರಾಯಣ ರಾಣೆ
ಕೇಂದ್ರ ಸಚಿವ ನಾರಾಯಣ ರಾಣೆ    

ಮುಂಬೈ: ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಅಖಾಡ ಸಜ್ಜಾಗಿದೆ. ‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕೆನ್ನೆಗೆ ಬಾರಿಸುತ್ತೇನೆ’ ಎಂದು ಹೇಳಿದ್ದಕ್ಕೆ ಬಂಧಿಸಲಾಗಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ಮಂಗಳವಾರ ತಡರಾತ್ರಿ ಜಾಮೀನು ನೀಡಲಾಗಿದೆ.

ಬಂಧನ ಬಳಿಕ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ರಾಣೆ ಅವರನ್ನು ಹಾಜರು ಪಡಿಸಿದ ಪೊಲೀಸರು ಏಳು ದಿನ ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು. ರಾಣೆ ಪರ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

ರಾಣೆ ಅವರ ಆರೋಗ್ಯ ಸರಿ ಇಲ್ಲ. ಹೀಗಾಗಿ ಅವರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ನ್ಯಾಯಾಧೀಶರು ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದರು. ಧ್ವನಿ ಪರೀಕ್ಷೆಗೆ ಮತ್ತು ವಿಚಾರಣೆಗೆ ಸಹಕರಿಸಬೇಕು ಎಂದು ನ್ಯಾಯಾಲಯ ರಾಣೆ ಅವರಿಗೆ ಸೂಚಿಸಿತು.

ADVERTISEMENT

ರಾಜ್ಯದ ರತ್ನಗಿರಿ ಜಿಲ್ಲೆಯಲ್ಲಿ ಬಿಜೆಪಿಯ ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದ ರಾಣೆ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ನಂತರ ಸಂಗಮೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. 20 ವರ್ಷದಲ್ಲಿ ಕೇಂದ್ರ ಸಚಿವರೊಬ್ಬರನ್ನು ಬಂಧಿಸಿದ್ದು ಇದೇ ಮೊದಲು.

ಸೋಮವಾರ ಜನಾಶೀರ್ವಾದ ಯಾತ್ರೆಯ ಭಾಗವಾಗಿ ರಾಯಗಡ ಜಿಲ್ಲೆಯಲ್ಲಿ ಮಾತನಾಡಿದ್ದ ರಾಣೆ ಅವರು, ‘ಠಾಕ್ರೆ ಅವರು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಷಣ ಮಾಡುವಾಗ, ದೇಶಕ್ಕೆ ಸ್ವಾತಂತ್ರ್ಯ ಬಂದು ಎಷ್ಟು ವರ್ಷ ಆಗಿದೆ ಎಂಬುದನ್ನೇ ಮರೆತು ಹೋದರು. ಪಕ್ಕದಲ್ಲಿ ಇರುವವರನ್ನು ಕೇಳಿ, ಭಾಷಣ ಮುಂದುವರಿಸಿದ್ದರು. ನಾನು ಅಲ್ಲಿಇದ್ದಿದ್ದರೆ, ಅವರ ಕೆನ್ನೆಗೆ ಬಾರಿಸುತ್ತಿದ್ದೆ’ ಎಂದು ಹೇಳಿದ್ದರು.

ಅವರ ಈ ಹೇಳಿಕೆಗೆ ಶಿವಸೇನಾ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ರಾಣೆ ವಿರುದ್ಧ ಮಹದ್, ನಾಸಿಕ್ ಮತ್ತು ರಾಯಗಡ ಜಿಲ್ಲೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ರಾಣೆ ಅವರ ಭಾಷಣದ ನಂತರ ಹಲವೆಡೆ ಘರ್ಷಣೆಯೂ ನಡೆದಿತ್ತು.

ಘರ್ಷಣೆಗೆ ಪ್ರಚೋದನೆ ನೀಡಿದ ಆರೋಪದಲ್ಲೂ ನಾಸಿಕ್‌ನಲ್ಲಿ ರಾಣೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ರಾಣೆ ಅವರನ್ನು ತಕ್ಷಣವೇ ಬಂಧಿಸಿ ಎಂದು ನಾಸಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಮಂಗಳವಾರ ಬೆಳಿಗ್ಗೆ ಆದೇಶ ಹೊರಡಿಸಿದ್ದರು.

ಈ ಬಂಧನ ಆದೇಶ ಕುರಿತ ಸುದ್ದಿಯನ್ನು ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ರಾಣೆ ಅವರು ಬೆದರಿಕೆ ಹಾಕಿದ್ದರು.

ಜನಾಶೀರ್ವಾದ ಯಾತ್ರೆಯ ಮಧ್ಯೆಯೇ, ‘ನಾನು ಯಾವುದೇ ಅಪರಾಧ ಮಾಡಿಲ್ಲ. ನೀವೆಲ್ಲಾ ನಿಜ ಏನು ಎಂಬುದನ್ನು ಪರಿಶೀಲಿಸಿ, ಆನಂತರ ಸುದ್ದಿ ಪ್ರಸಾರ ಮಾಡಬೇಕು.ಯಾವುದೇ ಅಪರಾಧ ಮಾಡದೇ ಇದ್ದರೂ ನನ್ನನ್ನು ತಕ್ಷಣ ಬಂಧಿಸಲಾಗುತ್ತದೆ ಎಂದು ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತಿವೆ. ನಾನೇನು ಸಾಮಾನ್ಯ ಮನುಷ್ಯನೇ? ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಬೆದರಿಕೆ ಹಾಕಿದರು. ಆದರೆ ನಂತರದ ಕೆಲವೇ ನಿಮಿಷಗಳಲ್ಲಿ ಪೊಲೀಸರು ರಾಣೆ ಅವರನ್ನು ಬಂಧಿಸಿದರು.

ಪೊಲೀಸ್ ಬಂಧನದಲ್ಲಿ ರಾಣೆ ಅವರ ಜೀವಕ್ಕೆ ಅಪಾಯವಿದೆ ಎಂದು ರಾಜ್ಯ ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ‘ರಾಣೆ ಅವರ ಮಾನಸಿಕ ಸಮತೋಲನ ತಪ್ಪಿದೆ. ಅವರಿಗೆ ಶಾಕ್‌ ಟ್ರೀಟ್‌ಮೆಂಟ್ ನೀಡುವ ಅವಶ್ಯಕತೆ ಇದೆ’ ಎಂದು ಮಹಾರಾಷ್ಟ್ರ ಸಚಿವ ಗುಲಾಬ್‌ರಾವ್ ಪಾಟೀಲ್‌ ಲೇವಡಿ ಮಾಡಿದ್ದಾರೆ.

ಸೇನಾ-ಬಿಜೆಪಿ ಜಟಾಪಟಿ:ರಾಣೆ ಅವರ ಹೇಳಿಕೆ ವಿರುದ್ಧ ರಾಜ್ಯದ ಹಲವೆಡೆ ಶಿವಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರಾಣೆ ಅವರ ಪ್ರತಿಕೃತಿಯನ್ನು ದಹಿಸಿದ್ದಾರೆ. ಮುಂಬೈನಲ್ಲಿ ರಾಣೆ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆಗ ಅವರನ್ನು ಬಿಜೆಪಿ ಕಾರ್ಯಕರ್ತರು ತಡೆದಿದ್ದಾರೆ. ಆಗ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ.

ರಾಜ್ಯದ ಹಲವೆಡೆ ಸೇನಾ ಕಾರ್ಯಕರ್ತರು ರಾಣೆ ಅವರ ಚಿತ್ರ ಮತ್ತು ಕೋಳಿ ಕಳ್ಳ ಎಂಬ ಬರಹ ಇರುವ ಪೋಸ್ಟರ್‌ಗಳನ್ನು ಹಾಕಿದ್ದಾರೆ. ರಾಜಕೀಯ ಪ್ರವೇಶಿಸುವ ಮುನ್ನ ರಾಣೆ ಅವರು ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಕೋಳಿ ಮಾಂಸದ ಅಂಗಡಿ ನಡೆಸುತ್ತಿದ್ದರು. ಅದನ್ನು ಲೇವಡಿ ಮಾಡಿ ಸೇನಾ ಕಾರ್ಯಕರ್ತರು ಈ ಪೋಸ್ಟರ್‌ ಹಾಕಿದ್ದಾರೆ.

‘ರಾಣೆ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡಬೇಕು’ ಎಂದು ಸೇನಾ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಹೈಕೋರ್ಟ್‌: ಸಿಗದ ರಕ್ಷಣೆ

ತಮ್ಮ ವಿರುದ್ಧ ದಾಖಲಾಗಿರುವ ಮೂರು ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ರಾಣೆ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ತಕ್ಷಣವೇ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ರಾಣೆ ಪರ ವಕೀಲರು ಹೈಕೋರ್ಟ್‌ ಪೀಠವನ್ನು ಒತ್ತಾಯಿಸಿದರು. ‘ತಮ್ಮನ್ನು ಬಂಧಿಸಬಾರದು ಮತ್ತು ಯಾವುದೇ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳಬಾರದು ಎಂದು ಪೊಲೀಸರಿಗೆ ನಿರ್ದೇಶನ ನೀಡಿ’ ಎಂದು ರಾಣೆ ತಮ್ಮ ಅರ್ಜಿಯಲ್ಲಿ ಕೋರಿದ್ದರು.

ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಮತ್ತು ಎನ್‌.ಜೆ.ಜಮಾದಾರ್ ಅವರಿದ್ದ ಪೀಠವು, ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿತ್ತು.

‘ಹೈಕೋರ್ಟ್‌ ರಿಜಿಸ್ಟ್ರಿಯಲ್ಲಿ ಮೊದಲು ಅರ್ಜಿ ಸಲ್ಲಿಸಿ, ತುರ್ತುವಿಚಾರಣೆಗೆ ಪಟ್ಟಿ ಮಾಡಿಸಿ. ಈ ಎಲ್ಲಾ ಪ್ರಕ್ರಿಯೆಗಳನ್ನು ಪಾಲಿಸಿ. ಆನಂತರ ವಿಚಾರಣೆ ನಡೆಸುತ್ತೇವೆ. ನೇರವಾಗಿ ಪೀಠಕ್ಕೆ ಬಂದರೆ ವಿಚಾರಣೆ ನಡೆಸಲು ಸಾಧ್ಯವಿಲ್ಲ. ರಿಜಿಸ್ಟ್ರಾರ್ ಮಾಡುವ ಕೆಲಸವನ್ನು ನಾವು ಮಾಡುವುದಿಲ್ಲ’ ಎಂದು ಪೀಠವು ಹೇಳಿದೆ.

ತಮ್ಮ ಬಂಧನದ ವಿರುದ್ಧ ನಿರೀಕ್ಷಣಾ ಜಾಮೀನು ನೀಡಿ ಎಂದು ರತ್ನಗಿರಿ ಜಿಲ್ಲಾ ನ್ಯಾಯಾಲಯಕ್ಕೂ ರಾಣೆ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತು.

ಬಂಧನ ಪ್ರಕ್ರಿಯೆ ಹೇಗೆ?

ಸಂಸತ್ತಿನ ಅಧಿವೇಶನದ ಅವಧಿ ಅಲ್ಲದೇ ಇದ್ದರೆ ಮತ್ತುಕ್ರಿಮಿನಲ್ ಪ್ರಕರಣಗಳಾಗಿದ್ದಲ್ಲಿ ಸಂಪುಟ ದರ್ಜೆಯ ಸಚಿವರನ್ನು ಬಂಧಿಸಬಹುದಾಗಿದೆ. ಆದರೆ, ‘ಬಂಧನದ ಕಾರಣ, ವಶಕ್ಕೆ ಪಡೆಯುವ ಸ್ಥಳದ ಬಗ್ಗೆ ಲಿಖಿತ ರೂಪದಲ್ಲಿ ರಾಜ್ಯಸಭಾ ಸಭಾಪತಿಗೆ ಮಾಹಿತಿ ನೀಡುವ ಮೂಲಕ ಸಚಿವರನ್ನು ಬಂಧಿಸಲು ಪೊಲೀಸರು, ನ್ಯಾಯಾಧೀಶರು ಮತ್ತು ಮ್ಯಾಜಿಸ್ಟ್ರೇಟ್ ಕ್ರಮ ತೆಗೆದುಕೊಳ್ಳಬಹುದು’ ಎಂದು ರಾಜ್ಯಸಭಾ ಕಲಾಪ ನಿಯಮಾವಳಿಗಳ 22ನೇ ಎ ಸೆಕ್ಷನ್ ಹೇಳುತ್ತದೆ.

‘ಸಿವಿಲ್ ಪ್ರಕರಣವಾಗಿದ್ದರೆ ಸಚಿವರನ್ನು ಸಂಸತ್ತಿನ ಅಧಿವೇಶನದ ಅವಧಿಯಲ್ಲಿ, ಅಧಿವೇಶನಕ್ಕೂ 40 ದಿನ ಮೊದಲು ಮತ್ತು ಅಧಿವೇಶನದ ನಂತರದ 40 ದಿನಗಳ ಅವಧಿಯಲ್ಲಿ ಬಂಧಿಸುವ ಹಾಗಿಲ್ಲ. ಆದರೆ ಕ್ರಿಮಿನಲ್ ಪ್ರಕರಣದಲ್ಲಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸುವಾಗ ಈ ವಿನಾಯಿತಿ ಅನ್ವಯವಾಗುವುದಿಲ್ಲ' ಎಂದು ನಿಯಮಗಳು ಹೇಳುತ್ತವೆ.

ಎರಡನೇ ಪ್ರಕರಣ:

2001ರ ಜೂನ್‌ 30ರಂದು ತಮಿಳುನಾಡಿನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಬಂಧನ ವೇಳೆ ಕೇಂದ್ರ ಸಚಿವರಾಗಿದ್ದ ಟಿ.ಬಾಲು ಮತ್ತು ಎಂ.ಮಾರನ್ ಅವರನ್ನು ಪೊಲೀಸರು ಬಂಧಿಸಿದ್ದರು. ದೇಶದ ಇತಿಹಾಸದಲ್ಲಿ ಕೇಂದ್ರ ಸಚಿವರನ್ನು ಬಂಧಿಸಿದ್ದು ಅದೇ ಮೊದಲು. ಆನಂತರ 20 ವರ್ಷಗಳಾದ ಮೇಲೆ ಅಂತಹ ಮತ್ತೊಂದು ಘಟನೆ ಈಗ ನಡೆದಿದೆ.

ಚೆನ್ನೈನಲ್ಲಿ ಮೇಲುಸೇತುವೆ ನಿರ್ಮಾಣ ಕಾರ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ಮತ್ತು ಅದರಲ್ಲಿ ಚೆನ್ನೈ ನಗರ ಪಾಲಿಕೆಗೆ ₹12 ಕೋಟಿ ನಷ್ಟವಾಗಿದೆ ಎಂದು ಪಾಲಿಕೆಯ ಅಂದಿನ ಅಯುಕ್ತ ಜೆ.ಸಿ.ಟಿ.ಆಚಾರ್ಯಲು ಅವರು 2001ರ ಜೂನ್ 29ರ ರಾತ್ರಿ ದೂರು ದಾಖಲಿಸಿದ್ದರು. ಆರೋಪಿಗಳ ಬಂಧನಕ್ಕೆ ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರವು ಆದೇಶಿಸಿತ್ತು.

ಜೂನ್ 30ರ ರಾತ್ರಿ 1.30ರಲ್ಲಿ ಕರುಣಾನಿಧಿ ಅವರ ಮನೆಗೆ ತೆರಳಿದ್ದ ಪೊಲೀಸರು, ಅವರನ್ನು ಬಂಧಿಸಿದ್ದರು. ಅವರ ಬಂಧನವನ್ನು ತಡೆಯಲು ಮುಂದಾದ ಎಂ.ಮಾರನ್ ಮತ್ತು ಟಿ.ಬಾಲು ಅವರನ್ನೂ ಪೊಲೀಸರು ಬಂಧಿಸಿದ್ದರು. ಈ ಬಂಧನವನ್ನು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಖಂಡಿಸಿದ್ದರು. ಕೇಂದ್ರದಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಸಹ ಬಂಧನವನ್ನು ಖಂಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.