ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೆಂಟ್ರಲ್ ವಿಸ್ತಾ ಪುನರ್ ಅಭಿವೃದ್ಧಿ ಸೇರಿ ನೂತನ ಸಂಸತ್ ಭವನದ ಕಟ್ಟಡ ಕಳೆದ ಐದು ವರ್ಷಗಳಲ್ಲಿ ಹಲವಾರು ಕಾನೂನು ಅಡೆತಡೆಗಳನ್ನು ದಾಟಿ ಭಾನುವಾರ ಲೋಕಾರ್ಪಣೆಯಾಗಿದೆ.
ಈ ಯೋಜನೆ ಆರಂಭದಿಂದ ಹಿಡಿದು, ಲೋಕಾರ್ಪಣೆಯವರೆಗೂ ಈ ಯೋಜನೆಯ ಭೂಬಳಕೆ ಬದಲಾವಣೆ, ಪರಿಸರ ಅನುಮತಿ, ಉದ್ಘಾಟನೆ ಯಾರು ಮಾಡಬೇಕೆನ್ನುವುದು ಸೇರಿ ಹಲವು ವಿವಾದಗಳು ಅಥವಾ ವ್ಯಾಜ್ಯಗಳು ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಡೆದವು. ಕಾನೂನು ಸಮರದ ಹಿನ್ನೋಟ ಇಲ್ಲಿದೆ.
ಯೋಜನೆಯ ವಿರುದ್ಧ ನ್ಯಾಯಾಲಯದಲ್ಲಿ ದಾಖಲಾದ ಮೊದಲ ಪ್ರಕರಣವೆಂದರೆ, ರಾಜೀವ್ ಸೂರಿ ಮತ್ತು ಅನೂಜ್ ಶ್ರೀವಾಸ್ತವ ಮತ್ತು ಇತರರು ಈ ಯೋಜನೆಗೆ ಭೂಬಳಕೆ ಬದಲಾವಣೆಗೆ ಅನುಮತಿ ಮತ್ತು ಪರಿಸರ ಅನುಮತಿ ನೀಡಿರುವುದನ್ನು ದೆಹಲಿ ನಗರ ಕಲಾ ಆಯೋಗ (ಡಿಯುಎಸಿ) ಮತ್ತು ಭೂಬಳಕೆಯ ಪರಂಪರೆ ಸಂರಕ್ಷಣಾ ಸಮಿತಿಯ ನಿರ್ಧಾರ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ 2020ರಲ್ಲಿ ಅರ್ಜಿ ಸಲ್ಲಿಸಿದ್ದರು.
2020ರ ಫೆಬ್ರುವರಿ 11ರಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ರಾಜೀವ್ ಶಕ್ದರ್ ಅವರಿದ್ದ ಏಕ ಸದಸ್ಯ ಪೀಠ, ಈ ಯೋಜನೆಯಲ್ಲಿ ಯಾವುದೇ ಬದಲಾವಣೆ ಆಗದಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಡಿಡಿಎ) ನಿರ್ದೇಶನ ನೀಡಿತು.
ಇದನ್ನು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ್ದ ಕೇಂದ್ರ ಸರ್ಕಾರ, ಏಕ ಸದಸ್ಯ ಪೀಠದ ಆದೇಶಕ್ಕೆ 2020ರ ಫೆಬ್ರುವರಿ 28ರಂದು ತಡೆಯಾಜ್ಞೆ ತಂದಿತ್ತು. ನಂತರ ಸುಪ್ರೀಂ ಕೋರ್ಟ್, ಈ ಅರ್ಜಿಯನ್ನು ಹೊಸದಾಗಿ ಸಲ್ಲಿಕೆಯಾಗಿದ್ದ ಮತ್ತಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಜತೆಗೆ ಸೇರಿಸಿಕೊಂಡು ವಿಚಾರಣೆ ನಡೆಸಿತು.
2021ರ ಜ.5ರಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು 2:1ರ ಬಹುಮತದೊಂದಿಗೆ ಸೆಂಟ್ರಲ್ ವಿಸ್ತಾ ಪುನರ್ ಅಭಿವೃದ್ಧಿ ಯೋಜನೆಗೆ ಹಸಿರು ನಿಶಾನೆ ತೋರಿತು. ಭೂಬಳಕೆ ಬದಲಾವಣೆಗೆ ಅನುಮತಿ ಮತ್ತು ಪರಿಸರ ಅನುಮತಿ ನೀಡಿರುವುದನ್ನು ತೀರ್ಪಿನಲ್ಲಿ ಎತ್ತಿಹಿಡಿಯಿತು. ಈ ಪೀಠದಲ್ಲಿದ್ದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಯೋಜನೆ ಅನುಷ್ಠಾನಕ್ಕೆ ಅನುಮತಿಸಿದರೂ, ಭೂಬಳಕೆ ಬದಲಾವಣೆಗೆ ಅನುಮತಿ ಮತ್ತು ಪರಿಸರ ಅನುಮತಿ ನೀಡಿರುವುದನ್ನು ಒಪ್ಪದೇ ಭಿನ್ನಮತದ ತೀರ್ಪು ನೀಡಿದರು.
ಭಾಷಾಂತರಕಾರ ಅನ್ಯಾ ಮಲ್ಹೋತ್ರಾ ಮತ್ತು ಇತಿಹಾಸಕಾರ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಸೊಹೈಲ್ ಹಶ್ಮಿ ಅವರು ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಇರುವುದರಿಂದ, ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗಾಗಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಕೋರಿ 2021ರ ಏಪ್ರಿಲ್‌ನಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು
ದೆಹಲಿ ಹೈಕೋರ್ಟ್ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನು ಒಳಗೊಂಡ ಪೀಠವು, ಇದು ರಾಷ್ಟ್ರೀಯ ಮಹತ್ವದ ಯೋಜನೆ ಎಂದು ಪರಿಗಣಿಸಿ, ಕಾಮಗಾರಿ ಮುಂದುವರಿಸಲು 2021ರ ಮೇ 31ರಂದು ಅವಕಾಶ ಕಲ್ಪಿಸಿತು. ಅರ್ಜಿದಾರರಿಗೆ ₹1 ಲಕ್ಷ ದಂಡ ವಿಧಿಸಿ, ಪಿಐಎಲ್ ವಜಾಗೊಳಿಸಿತು. ಮೇಲ್ಮನವಿ ಪುರಸ್ಕರಿಸಲು ಮತ್ತು ದಂಡದ ಮೊತ್ತಕ್ಕೆ ತಡೆ ನೀಡಲು ನಿರಾಕರಿಸಿತು.
ಹೊಸ ಸಂಸತ್ ಭವನದ ಮೇಲಿರುವ ರಾಷ್ಟ್ರೀಯ ಲಾಂಛನದ ಕಂಚಿನ ಪ್ರತಿಮೆಯಲ್ಲಿ ಸಿಂಹಗಳು ಕೆರಳಿದ ರೂಪದಲ್ಲಿವೆ ಎಂದು, ಈ ವಿನ್ಯಾಸವನ್ನು ಪ್ರಶ್ನಿಸಿ, ವಕೀಲ ಅಲ್‌ಡ್ಯಾನಿಶ್ ರೇನ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಕಂಚಿನ ಪ್ರತಿಮೆಯು ‘ಭಾರತದ ರಾಷ್ಟ್ರ ಲಾಂಛನ (ಅಸಮಂಜಸ ಬಳಕೆ ನಿಷೇಧ) ಕಾಯ್ದೆ–2005’ ಉಲ್ಲಂಘಿಸಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿತು.
ಇನ್ನು ಕೊನೆಯದಾಗಿ, ನೂತನ ಸಂಸತ್ ಭವನವನ್ನು ರಾಷ್ಟ್ರಪತಿಯಿಂದಲೇ ಉದ್ಘಾಟಿಸಲು ಲೋಕಸಭೆ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಮೂಲದ ವಕೀಲೆ ಸಿ.ಆರ್.ಜಯಾ ಸುಕಿನ್ ಅವರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಯಿತು.
ಉದ್ಘಾಟನೆಗೆ ಎರಡು ದಿನ ಮುಂಚಿತವಾಗಿ, ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಹಾಗೂ ಪಿ.ಎಸ್.ನರಸಿಂಹ ಅವರಿದ್ದ ರಜಾಕಾಲದ ಪೀಠವು ಪಿಐಎಲ್ ವಜಾಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.