ADVERTISEMENT

ಮಂಕಿಪಾಕ್ಸ್ ಖಾಯಿಲೆ ಆತಂಕ: ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ

ಪಿಟಿಐ
Published 19 ಜುಲೈ 2022, 1:25 IST
Last Updated 19 ಜುಲೈ 2022, 1:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಖಾಯಿಲೆಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಿದ್ದು, ಆ ಪ್ರಕಾರ ವಿದೇಶಗಳಿಂದ ಬಂದವರು ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕಿದೆ.

ಈ ಕುರಿತು ಸೋಮವಾರ ಸಂಜೆ ಆರೋಗ್ಯ ಸಚಿವಾಲಯ ತುರ್ತು ಸೂಚನೆ ಹೊರಡಿಸಿದ್ದು, ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚನೆಗಳ ಪ್ರಕಾರ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಇದರಿಂದ ಮಂಕಿಪಾಕ್ಸ್ ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದೆ.

ದುಬೈಯಿಂದ ಬಂದಿದ್ದ ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರಿಗೆ ನಿನ್ನೆಯಷ್ಟೇ ‘ಮಂಕಿಪಾಕ್ಸ್‌’ ತಗುಲಿರುವುದು ಖಾತರಿಯಾಗಿತ್ತು. ದೇಶದಲ್ಲಿ ಪತ್ತೆಯಾದ ಎರಡನೇ ಪ್ರಕರಣ ಇದಾಗಿದೆ.

ADVERTISEMENT

ಇದಕ್ಕೂ ಮುನ್ನ ಕೇರಳದ ಕೊಲ್ಲಂ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ದೃಢ‍ಪಟ್ಟಿತ್ತು.

‘31 ವರ್ಷದ ವ್ಯಕ್ತಿಯು ಜುಲೈ 13ರಂದು ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅವರಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಕಂಡುಬಂದಿದ್ದವು. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಂದ ಸಂಗ್ರಹಿಸಲಾಗಿದ್ದ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ರವಾನಿಸಲಾಗಿತ್ತು. ವ್ಯಕ್ತಿಗೆ ರೋಗ ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಕೊಲ್ಲಂ ಜಿಲ್ಲೆಯಲ್ಲಿ ಮಂಕಿಪಾಕ್ಸ್‌ನ ಮೊದಲ ಪ್ರಕರಣ ಪತ್ತೆಯಾದ ಬೆನ್ನಲ್ಲೇಪರಿಸ್ಥಿತಿಯ ಅವಲೋಕನಕ್ಕಾಗಿ ಕೇಂದ್ರದ ವಿಶೇಷ ತಂಡವೊಂದನ್ನು ಕೇರಳಕ್ಕೆ ರವಾನಿಸಲಾಗಿತ್ತು.ವೈರಾಣುವಿನ ಪಸರಿಸುವಿಕೆ ತಡೆಯುವ ದಿಸೆಯಲ್ಲಿ ಈ ತಂಡವು ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೂಡಿ ಕೆಲಸ ಮಾಡಲಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೋದ ವಾರ ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ ತಿಳಿಸಿತ್ತು.

‘ಮಂಕಿಪಾಕ್ಸ್‌ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಪ್ರಕರಣ ಪತ್ತೆಯಾದಲ್ಲಿ, ಅದನ್ನು ತಡೆಯಲು ಬೇಕಿರುವ ಎಲ್ಲಾ ಸಹಕಾರವನ್ನೂ ರಾಜ್ಯಗಳಿಗೆ ನೀಡಲಾಗುತ್ತದೆ. ಮಂಕಿಪಾಕ್ಸ್‌ ಅಷ್ಟೇನೂ ಗಂಭೀರವಾದ ಕಾಯಿಲೆಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗಬಾರದು’ ಎಂದೂ ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.