ADVERTISEMENT

ಉಗ್ರರ ಸಂಘಟನೆಗಳಿಂದ ಬಳಕೆ ಶಂಕೆ; 14 ಮೊಬೈಲ್‌ ಅಪ್ಲಿಕೇಷನ್‌ಗಳ ನಿಷೇಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮೇ 2023, 14:25 IST
Last Updated 1 ಮೇ 2023, 14:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಯೋತ್ಪಾದಕ ಸಂಘಟನೆಗಳು ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನಕ್ಕಾಗಿ ವ್ಯಾಪಕವಾಗಿ ಬಳಸುತ್ತಿವೆ ಎನ್ನಲಾದ 14 ಮೊಬೈಲ್ ಅಪ್ಲಿಕೇಷನ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಸಂಘಟನೆಗಳು ಕೆಳಹಂತದ ಕಾರ್ಯಕರ್ತರಿಗೆ ಸಂದೇಶ ರವಾನಿಸಲು ಹಾಗೂ ಪಾಕಿಸ್ತಾನದ ನೆಲದಿಂದ ಸಂದೇಶವನ್ನು ಸ್ವೀಕರಿಸಲು ಈ ಅಪ್ಲಿಕೇಷನ್‌ಗಳು ಬಳಕೆಯಾಗುತ್ತಿದ್ದವು ಎಂದು ಆರೋಪಿಸಲಾಗಿದೆ.

ಕ್ರಿಪ್‌ವೈಸರ್, ಎನಿಗ್ಮಾ, ಸೇಫ್‌ಸ್ವಿಸ್, ವಿಕ್ರ್‌ಮೀ, ಮೀಡಿಯಾಫೈರ್, ಬ್ರಯರ್, ಬಿ–ಚಾಟ್, ನಂಡ್‌ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್‌ ಲೈನ್, ಜಂಗಿ, ತ್ರೀಮಾ –ನಿಷೇಧಿಸಲಾದ ಅಪ್ಲಿಕೇಷನ್‌ಗಳು.

ADVERTISEMENT

ಭದ್ರತಾ ಮತ್ತು ಗುಪ್ತದಳ ಸಂಸ್ಥೆಗಳ ಶಿಫಾರಸು ಆಧರಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್‌ 69ಎ ಅನ್ವಯ ಈ ಅಪ್ಲಿಕೇಷನ್‌ಗಳನ್ನು ನಿಷೇದಿಸಲಾಗಿದೆ. ಈ ಅಪ್ಲಿಕೇಷನ್‌ಗಳಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಆಗುತ್ತಿತ್ತು ಹಾಗೂ ಇವು ದೇಶದ ಕಾನೂನುಗಳನ್ನು ಪಾಲಿಸುತ್ತಿರಲಿಲ್ಲ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

ಭಯೋತ್ಪಾದಕ ಸಂಘಟನೆಗಳು ಈ ಅಪ್ಲಿಕೇಷನ್‌ಗಳ ಮೂಲಕ ಸಂವಹನ ನಡೆಸುತ್ತಿವೆ. ಇದನ್ನು ಬಳಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ವಿರುದ್ಧ ಅಪಪ್ರಚಾರ ಕಾರ್ಯದಲ್ಲಿ ತೊಡಗಿವೆ. ಇವುಗಳನ್ನು ನಿಷೇಧಿಸಬೇಕು ಎಂದು ಭದ್ರತಾ ಸಂಸ್ಥೆಗಳು ಶಿಫಾರಸು ಮಾಡಿದ್ದವು. 

ಈ ಪೈಕಿ ಬಹುತೇಕ ಅಪ್ಲಿಕೇಷನ್‌ಗಳನ್ನು ಬಳಕೆದಾರರ ಗೋಪ್ಯತೆಯನ್ನು ರಕ್ಷಿಸಲು ಅನುವಾಗುವಂತೆ ರೂಪಿಸಲಾಗಿತ್ತು. ಅಲ್ಲದೆ, ಈ ಅಪ್ಲಿಕೇಷನ್‌ ಮೂಲಕ ಯಾರೆಲ್ಲಾ ಪರಸ್ಪರ ಸಂಪರ್ಕದಲ್ಲಿ ಇದ್ದಾರೆ ಎಂದು ಗೊತ್ತಾಗದಂತೆ ಒಳವಿನ್ಯಾಸವನ್ನು ಮಾಡಲಾಗಿತ್ತು ಎಂದು ಹೇಳಲಾಗಿದೆ. 

ಈ ಹಿಂದೆ ಕೇಂದ್ರವು ಚೀನಾ ಮೂಲದ ಹಲವು ಅಪ್ಲಿಕೇಷನ್‌ಗಳನ್ನು ನಿಷೇಧಿಸಿತ್ತು. ದೇಶದ ಸಾರ್ವಭೌಮತೆ, ಏಕತೆ, ದೇಶದ ರಕ್ಷಣೆ ಬಗ್ಗೆ ಈ ಅಪ್ಲಿಕೇಷನ್‌ಗಳು ಪೂರ್ವಗ್ರಹಪೀಡಿತವಾಗಿವೆ ಎಂದು ಕಾರಣ ನೀಡಲಾಗಿದೆ.

ಕಳೆದ ಹಲವು ವರ್ಷಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಚೀನಾ ಮೂಲಕ ಅಪ್ಲಿಕೇಷನ್‌ಗಳನ್ನು ನಿಷೇಧಿಸಲಾಗಿದೆ. ಜನರು ಹೆಚ್ಚಾಗಿ ಬಳಸುತ್ತಿದ್ದ ಟಿಕ್‌ಟಾಕ್‌, ಶೇರ್ ಇಟ್, ವಿ ಚಾಟ್, ಹೆಲೊ, ಯುಸಿ ಬ್ರೌಸರ್, ಕ್ಯಾಮ್‌ಸ್ಕ್ಯಾನರ್‌ ಕೂಡಾ ಇವುಗಳಲ್ಲಿ ಸೇರಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.