ತಿರುವನಂತಪುರ: ಭೂಕುಸಿತದಿಂದ ತತ್ತರಿಸಿರುವ ವಯನಾಡ್‌ನಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಕೈಗೊಳ್ಳಲು ಆರ್ಥಿಕ ನೆರವು ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕೇರಳ ವಿಧಾನಸಭೆಯಲ್ಲಿ ಸೋಮವಾರ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ತಿಂಗಳುಗಳ ನಂತರವೂ, ಹಣಕಾಸಿನ ನೆರವು ಸಿಗದಿದ್ದಕ್ಕೆ ಅಸಮಾಧಾನ ವ್ಯಕ್ತವಾಯಿತು.
ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿರುವ ನಿರ್ಣಯದಲ್ಲಿ ಸಂತ್ರಸ್ತರ ಬ್ಯಾಂಕ್ ಸಾಲವನ್ನು ಮನ್ನಾ ಮಾಡಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ.
ಈ ಕುರಿತಂತೆ ಕಾಂಗ್ರೆಸ್‌ನ ಶಾಸಕ ಟಿ. ಸಿದ್ದೀಕ್ ಮಂಡಿಸಿದ ನಿಲುವಳಿ ಸೂಚನೆ ಮೇಲೆ ನಡೆದ ಚರ್ಚೆಯ ಸಂದರ್ಭ, ಆಡಳಿತಾರೂಢ ಎಲ್‌ಡಿಎಫ್ ಹಾಗೂ ವಿರೋಧಪಕ್ಷದ ಒಕ್ಕೂಟ ಯುಡಿಎಫ್ ಒಟ್ಟಾಗಿ ಕೇಂದ್ರದ ವಿರುದ್ಧ ಕಿಡಿಕಾರಿದವು.
‘ಫೋಟೊ ಶೂಟ್’ಗಾಗಿ ಮೋದಿ ವಿಪತ್ತು ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಯುಡಿಎಫ್ ಕಿಡಿಕಾರಿದರೆ, ದುರಂತದ ಸಂದರ್ಭದಲ್ಲಿ ಪುನರ್ವಸತಿಗಾಗಿ ಆರ್ಥಿಕ ನೆರವು ಒದಗಿಸುವುದು ಕೇಂದ್ರ ಸರ್ಕಾರದ ನೈತಿಕ ಜವಾಬ್ದಾರಿಯಾಗಿದೆ ಎಂದು ಎಲ್‌ಡಿಎಫ್ ಹೇಳಿದೆ.
‘ಪ್ರಧಾನಿ ಫೋಟೊಶೂಟ್‌ಗಾಗಿ ಬಂದಿದ್ರಾ? ಎಂದು ಜನರು ಕೇಳುತ್ತಿದ್ದಾರೆ. ಮೋದಿಯವರ ಭರವಸೆಯ ಹೊರತಾಗಿಯೂ ಭೂಕುಸಿತ ಸಂತ್ರಸ್ತರ ಪುನರ್ವಸತಿಗಾಗಿ ಕೇಂದ್ರವು ಒಂದು ಪೈಸೆಯನ್ನು ನೀಡಿಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿವರವಾದ ಪ್ರಸ್ತಾಪಗಳನ್ನು ಸಲ್ಲಿಸಿದ ನಂತರವೂ ಕೇರಳಕ್ಕೆ ಕೇಂದ್ರದ ನೆರವು ವಿಳಂಬವಾಗಿದೆ’ ಎಂದು ವಯನಾಡ್‌ನ ಕಲ್ಪೆಟ್ಟ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ. ಸಿದ್ದೀಕ್ ಅಸಮಾಧಾನ ವ್ಯಕ್ತಪಡಿಸಿದರು.
‘ಕೇಂದ್ರದ ವಿಳಂಬ ಧೋರಣೆ ವಿರುದ್ಧ ಹೈಕೋರ್ಟ್ ಮೊರೆ ಹೋಗಿ ಪರಿಹಾರ ಪಡೆಯಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪುನರ್ವಸತಿಗಾಗಿ ಕನಿಷ್ಠ ₹2 ಸಾವಿರ ಕೋಟಿ ಬೇಕಿದೆ. ಬದುಕುಳಿದಿರುವವರ ಕಷ್ಟ ಹೇಳತೀರದಾಗಿದೆ. ವಯನಾಡನ್ನು ನಿರ್ಲಕ್ಷಿಸಿರುವುದು ನೋವಿನ ಸಂಗತಿಯಾಗಿದೆ’ ಎಂದರು.
ಭೂಕುಸಿತದಲ್ಲಿ ಇನ್ನೂ 47 ಜನರು ನಾಪತ್ತೆಯಾಗಿದ್ದರೂ ರಾಜ್ಯ ಸರ್ಕಾರ ಶೋಧವನ್ನು ನಿಲ್ಲಿಸಿದೆ ಎಂದು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡವು.
‘ಕರ್ನಾಟಕದ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾದವರ ಪತ್ತೆಗಾಗಿ 72 ದಿನ ಶೋಧ ನಡೆದರೆ, ವಯನಾಡ್‌ನಲ್ಲಿ ಕೇವಲ 14 ದಿನ ಶೋಧ ನಡೆಸಲಾಯಿತು. ಶೋಧವನ್ನು ಪುನರಾರಂಭಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಆಗ್ರಹಿಸಿದರು.
ವಯನಾಡ್‌ನ ಭೂಕುಸಿತ ಸಂತ್ರಸ್ತರ ಪುನರ್ವಸತಿಗಾಗಿ ರಾಜ್ಯ ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಧಾನಿ ಫೋಟೋಶೂಟ್‌ಗಾಗಿ ಬಂದಿದ್ರಾ? ಪರಿಹಾರಕ್ಕಾಗಿ ಹೈಕೋರ್ಟ್‌ಗೆ ಮೊರೆ? ವಯನಾಡ್‌ನಲ್ಲಿ ಶೋಧ ಪುನರಾರಂಭಿಸಿ
ವಯನಾಡ್‌ನಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ಒದಗಿಸಲಿದೆ. ಸಂತ್ರಸ್ತರನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದಿಲ್ಲ.ನಿರ್ಮಲಾ ಸೀತಾರಾಮನ್ ಕೇಂದ್ರ ಹಣಕಾಸು ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.