ADVERTISEMENT

ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಕೇಂದ್ರದ ಹುನ್ನಾರ: ಕೆಸಿಆರ್‌ ಆರೋಪ

ಪಿಟಿಐ
Published 2 ಜೂನ್ 2022, 10:41 IST
Last Updated 2 ಜೂನ್ 2022, 10:41 IST
ಕೆ. ಚಂದ್ರಶೇಖರ ರಾವ್‌
ಕೆ. ಚಂದ್ರಶೇಖರ ರಾವ್‌   

ಹೈದರಾಬಾದ್‌: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಹುನ್ನಾರ ನಡೆಸುತ್ತಿದೆ. ಅಲ್ಲದೆ ತೆಲಂಗಾಣದ ಬಗ್ಗೆ ತಾರತಮ್ಯ ಮಾಡುತ್ತಿದೆ’ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಆರೋಪಿಸಿದ್ದಾರೆ.

ತೆಲಂಗಾಣ ರಾಜ್ಯ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು, ‘ಕೇಂದ್ರದ ದ್ವೇಷ ರಾಜಕಾರಣದಿಂದಾಗಿಯೇ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ’ ಎಂದು ನೇರ ವಾಗ್ದಾಳಿ ನಡೆಸಿದರು.

‘ಕೇಂದ್ರದಲ್ಲಿ ಇದುವರೆಗೆ ಆಡಳಿತ ನಡೆಸಿದ್ದ ಸರ್ಕಾರಗಳು ಸಂವಿಧಾನದ ಆಶಯ ಮತ್ತು ರಾಜ್ಯಗಳ ಸ್ವಾಯತ್ತತೆಯನ್ನು ಎತ್ತಿಹಿಡಿದಿದ್ದವು. ಈಗ ಆಡಳಿತದಲ್ಲಿರುವ ಸರ್ಕಾರವು ‘ಸದೃಢ ಕೇಂದ್ರ –ದುರ್ಬಲ ರಾಜ್ಯಗಳು’ ಎಂಬ ಸರ್ವಾಧಿಕಾರದ ಚಿಂತನೆಯನ್ನು ಹೊಂದಿದೆ. ಇದೇ ಕಾರಣಕ್ಕೆ ರಾಜ್ಯಗಳ ಹಕ್ಕುಗಳ ಉಲ್ಲಂಘನೆಯು ಈ ಸರ್ಕಾರದ ಆಡಳಿತದಲ್ಲಿ ಉತ್ತುಂಗಕ್ಕೇರಿದೆ’ ಎಂದೂ ತರಾಟೆಗೆ ತೆಗೆದುಕೊಂಡರು.

ADVERTISEMENT

ಕೇಂದ್ರ ಸರ್ಕಾರ ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಿದೆ. ತೆರಿಗೆಯಲ್ಲಿ ಸಂವಿಧಾನದತ್ತವಾಗಿ ರಾಜ್ಯಗಳಿಗೆ ನೀಡಬೇಕಾದ ಪಾಲನ್ನು ಸೆಸ್‌ ರೂಪದಲ್ಲಿ ಕಬಳಿಸುತ್ತಿದೆ. ರಾಜ್ಯಗಳ ಆರ್ಥಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಲು ಹಲವು ನಿರ್ಬಂಧಗಳನ್ನು ಹೇರುತ್ತಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರಗಳು ‘ಆರ್ಥಿಕ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ 2003’ಕ್ಕೆ ಬದ್ಧರಾಗಬೇಕು ಎಂದು ಕೇಂದ್ರ ಬಯಸುತ್ತದೆ. ಆದರೆ, ಕೇಂದ್ರ ಸರ್ಕಾರವೇ ಅದಕ್ಕೆ ಬದ್ಧವಾಗಿಲ್ಲ. ಕೇಂದ್ರದ ಈ ನಿಲುವು ತೆಲಂಗಾಣದಂತಹ ರಾಜ್ಯಗಳ ಪ್ರಗತಿಗೆ ಅಡ್ಡಿಯಾಗಿದೆ ಎಂದರು.

ರಾಜ್ಯಗಳ ಹಕ್ಕುಗಳನ್ನು ಉಲ್ಲಂಘಿಸುವುದನ್ನು ಕೇಂದ್ರದ ಎನ್‌ಡಿಎ ಸರ್ಕಾರವು ಇನ್ನಾದರೂ ನಿಲ್ಲಿಸಬೇಕು ಹಾಗೂ ರಾಜ್ಯಗಳ ಮೇಲೆ ಹೇರುತ್ತಿರುವ ನಿರ್ಬಂಧಗಳ ಕುರಿತು ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

‘ಕೇಂದ್ರದ ‘ರೈತ ವಿರೋಧಿ’ ವಿದ್ಯುತ್‌ ಸುಧಾರಣೆ ಕ್ರಮಗಳನ್ನು ಜಾರಿಗೊಳಿಸಲು ವಿರೋಧಿಸಿದ ಕಾರಣಕ್ಕೆ ತೆಲಂಗಾಣ ವಾರ್ಷಿಕ ₹ 5000 ಕೋಟಿ ಕಳೆದುಕೊಳ್ಳುತ್ತಿದೆ. ಐದು ವರ್ಷದಲ್ಲಿ ₹ 25,000 ಕೋಟಿ ನಷ್ಟವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.