ನವದೆಹಲಿ: ‘ಕೇಂದ್ರ ಪರಿಸರ ಸಚಿವಾಲಯವು ದೇಶದಲ್ಲಿರುವ ಸಾಕು ಆನೆಗಳ ಅನುವಂಶೀಯ ದತ್ತಾಂಶಗಳನ್ನು ಸಿದ್ಧಪಡಿಸಲು ನಿರ್ಧರಿಸಿದೆ. ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವುದು ಇದರ ಉದ್ದೇಶ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಮೃತ ಆನೆಯು ಇತರ ಪ್ರಾಣಿಗಳಿಗೆ ಆಹಾರವಾಗಬಹುದು. ಹೀಗಾಗಿ ಒಂದೊಮ್ಮೆ ಆನೆಯು ವಿಷಾಹಾರ ಸೇವನೆಯಿಂದ ಮೃತಪಟ್ಟಿರದಿದ್ದರೆ ಅದನ್ನು ಸುಡದಿರಲು ನಿರ್ಧರಿಸಲಾಗಿದೆ. ಈ ಸಂಬಂಧ ಸಚಿವಾಲಯವು ಎಲ್ಲಾ ರಾಜ್ಯಗಳಿಗೂ ನಿರ್ದೇಶನ ನೀಡುವ ಸಾಧ್ಯತೆ ಇದೆ’ ಎಂದಿದ್ದಾರೆ.
‘ಪ್ರತಿಯೊಂದು ಆನೆಯ ಚಿತ್ರ ಸಹಿತ ದತ್ತಾಂಶ ಹಾಗೂ ಅದರ ಮಾಲೀಕರ ಮಾಹಿತಿಯು ಸಚಿವಾಲಯದಲ್ಲಿ ಇರಲಿದೆ. ಯಾವುದಾದರೂ ಆನೆಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದೇ ಆದಲ್ಲಿ ಅದನ್ನು ಪತ್ತೆಹಚ್ಚಲು ದತ್ತಾಂಶವು ನೆರವಾಗಲಿದೆ’ ಎಂದು ತಿಳಿಸಿದ್ದಾರೆ.
ಅಂಡಮಾನ್ ನಿಕೋಬಾರ್ ಸೇರಿದಂತೆ ದೇಶದ 26 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 2,675 ಸಾಕು ಆನೆಗಳಿವೆ. ಈ ಪೈಕಿ ಶೇ 41ರಷ್ಟು ಆನೆಗಳು ಈಶಾನ್ಯ ರಾಜ್ಯಗಳಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.