ADVERTISEMENT

ಜೂನ್ 25 ಅನ್ನು ‘ಸಂವಿಧಾನದ ಹತ್ಯೆಯ ದಿನ’ವನ್ನಾಗಿ ಘೋಷಿಸಿದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 12:19 IST
Last Updated 12 ಜುಲೈ 2024, 12:19 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜೂನ್‌ 25 ಅನ್ನು ‘ಸಂವಿಧಾನ ಹತ್ಯಾ ದಿವಸ್‌’ (ಸಂವಿಧಾನದ ಹತ್ಯೆಯ ದಿನ) ಎಂದು ಘೋಷಿಸಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರ ದುರುಪಯೋಗದ ವಿರುದ್ಧ ಹೋರಾಡಿದವರಿಗೆ ಆ ದಿನದಂದು ಗೌರವ ಸಲ್ಲಿಸಲಾಗುವುದು ಎಂದು ಸರ್ಕಾರ ಹೇಳಿದೆ.

ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ‘ಸಂವಿಧಾನ ಉಳಿಸಿ’ ಅಭಿಯಾನಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಈ ಘೋಷಣೆ ಮಾಡಿದೆ ಎನ್ನಲಾಗುತ್ತಿದೆ. 

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತದ ಸಂವಿಧಾನವನ್ನು ತುಳಿದಾಗ ಏನಾಗುತ್ತದೆ ಎಂಬುದನ್ನು ನೆನಪು ಮಾಡಿಕೊಳ್ಳಲು ಜೂನ್‌ 25 ಅನ್ನು ಸಂವಿಧಾನ ಹತ್ಯಾ ದಿವಸ್‌ ಆಗಿ ಆಚರಿಸಲಾಗುವುದು. ತುರ್ತುಪರಿಸ್ಥಿತಿಯಿಂದ ಬಳಲಿದ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವ ದಿನ ಅದಾಗಿದೆ. ಅದು ಭಾರತದ ಇತಿಹಾಸದಲ್ಲಿ ಕಾಂಗ್ರೆಸ್‌ನ ಕರಾಳ ಮುಖವನ್ನು ಅನಾವರಣಗೊಳಿಸುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

‘ಈ ನಿರ್ಧಾರವು ಪ್ರತಿ ಭಾರತೀಯನಲ್ಲೂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ಕುರಿತ ಜ್ವಾಲೆಯನ್ನು ಶಾಶ್ವತವಾಗಿ ಜೀವಂತವಾಗಿಡಲು ನೆರವಾಗುತ್ತದೆ. ಕಾಂಗ್ರೆಸ್‌ನಂತಹ ಸರ್ವಾಧಿಕಾರಿ ಶಕ್ತಿಗಳು ಆ ಭೀಕರತೆಯನ್ನು ಪುನರಾವರ್ತಿಸದಂತೆ ತಡೆಯುತ್ತದೆ’ ಎಂದು ಗೃಹ ಸಚಿವ ಅಮಿತ್‌ ಶಾ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. 

ಈ ಕುರಿತು ಅಧಿಸೂಚನೆ ಹೊರಡಿಸಿರುವ ಗೃಹ ಸಚಿವಾಲಯ, ‘1975ರ ಜೂನ್‌ 25ರಂದು ತುರ್ತುಪರಿಸ್ಥಿತಿ ಘೋಷಣೆಯಾಯಿತು. ಸರ್ಕಾರವು ಅಧಿಕಾರ ದುರುಪಯೋಗಪಡಿಸಿಕೊಂಡಿತು. ದೇಶದ ಜನರು ಮಿತಿಮೀರಿದ ದೌರ್ಜನ್ಯಕ್ಕೆ ತುತ್ತಾದರು. ಈ ಅವಧಿಯಲ್ಲಿ ಅಧಿಕಾರ ದುರುಪಯೋಗದ ವಿರುದ್ಧ ಹೋರಾಡಿದ ಮತ್ತು ಸಂಕಷ್ಟ ಅನುಭವಿಸಿದ ಎಲ್ಲರಿಗೂ ಗೌರವ ಸಲ್ಲಿಸಲು ಜೂನ್‌ 25 ಅನ್ನು ‘ಸಂವಿಧಾನ ಹತ್ಯಾ ದಿವಸ್‌’ ಎಂದು ಘೋಷಿಸಲಾಗಿದೆ ಎಂದು ತಿಳಿಸಿದೆ. 

ಮೋದಿ ಮುಕ್ತಿ ದಿವಸ್‌– ಕಾಂಗ್ರೆಸ್‌

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ದಿನವಾದ ಜೂನ್‌ 4 ಅನ್ನು ‘ಮೋದಿ ಮುಕ್ತಿ ದಿವಸ್‌’ ಎಂದು ಕರೆದಿದೆ. 10 ವರ್ಷಗಳ ಕಾಲ ಘೋಷಿತವಲ್ಲದ ತುರ್ತುಪರಿಸ್ಥಿತಿಯನ್ನು ಜನರು ಎದುರಿಸುತ್ತಿದ್ದಾರೆ ಎಂದಿರುವ ಕಾಂಗ್ರೆಸ್‌ ಜೂನ್‌ 4 ಅನ್ನು ಮೋದಿ ಅವರು ವೈಯಕ್ತಿಕ ರಾಜಕೀಯ ಮತ್ತು ನೈತಿನ ಸೋಲಿನ ದಿನ ಎಂದು ವರ್ಣಿಸಿದೆ.

ಭಾರತದಲ್ಲಿ 1975ರ ಜೂನ್ 25ರಂದು ಆಂತರಿಕ ತುರ್ತುಪರಿಸ್ಥಿತಿಯನ್ನು ಹೇರಲಾಗಿತ್ತು. ಈಚೆಗೆ ಆಂತರಿಕ ತುರ್ತು ಪರಿಸ್ಥಿತಿ ಹೇರಿದ 49ನೇ ವಾರ್ಷಿಕೋತ್ಸವದ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು, ಆಂತರಿಕ ತುರ್ತುಪರಿಸ್ಥಿತಿಯನ್ನು ಖಂಡಿಸಿದ ಮತ್ತು ಪ್ರತಿಭಟಿಸಿದ ಎಲ್ಲಾ ಭಾರತದ ನಾಗರಿಕರಿಗೆ ವಂದನಾರ್ಪಣೆಯನ್ನು ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.