ನವದೆಹಲಿ: ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶನಿವಾರರೈತರಿಗೆ ಮನವಿ ಮಾಡಿದರು.‘ಭತ್ತದ ಕೂಳೆಗೆ ಬೆಂಕಿ ಹಾಕುವುದನ್ನು ಅಪರಾಧ ಎಂದು ಪರಿಗಣಿಸಬಾರದು ಎಂಬ ಕೃಷಿಕರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿದೆ’ ಎಂದೂ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಳೆ ವೈವಿಧ್ಯೀಕರಣ, ಕನಿಷ್ಠ ಬೆಂಬಲ ಬೆಲೆ ಖಾತರಿ ಸೇರಿದಂತೆ ಇತರೆ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಪ್ರಧಾನಮಂತ್ರಿ ಈಗಾಗಲೇ ಪ್ರಕಟಿಸಿರುವಂತೆ ಸಮಿತಿ ರಚನೆಯೊಂದಿಗೆ ಈ ಬೇಡಿಕೆಗಳನ್ನೂ ಈಡೇರಿಸಲಾಗುವುದು ಎಂದು ಹೇಳಿದ್ದಾರೆ.
ಪ್ರತಿಭಟನನಿರತ ರೈತರ ಮೇಲೆ ಹೂಡಿರುವ ಮೊಕದ್ದಮೆಗಳ ವಾಪಸಾತಿಯು ರಾಜ್ಯಗಳ ವ್ಯಾಪ್ತಿಗೆ ಬರಲಿದೆ. ಪ್ರಕರಣಗಳ ಗಂಭೀರತೆ ಆಧರಿಸಿ ಪ್ರಕರಣ ಕೈಬಿಡುವುದು ಹಾಗೂ ಪರಿಹಾರ ಘೋಷಣೆ ಕುರಿತು ರಾಜ್ಯ ಸರ್ಕಾರಗಳೇ ತೀರ್ಮಾನಿಸಬೇಕಿದೆ ಎಂದರು.
ಮೂರು ಕೃಷಿ ಕಾಯ್ದೆಗಳನ್ನು ಕೈಬಿಡಲಾಗುವುದು ಎಂದು ಸರ್ಕಾರ ಪ್ರಕಟಿಸಿದ ನಂತರವೂ ಮುಷ್ಕರ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಹೀಗಾಗಿ, ದೊಡ್ಡ ಮನಸ್ಸು ಮಾಡಿ ಧರಣಿ ಕೈಬಿಡುವಂತೆ ಕೋರುತ್ತೇನೆ ಎಂದು ಸಚಿವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.