ನವದೆಹಲಿ: ಮಹಾರಾಷ್ಟ್ರ ಕೇಡರ್‌ನ 2023ರ ತಂಡದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಹಿಂದುಳಿದ ವರ್ಗಗಳ ಪ್ರಮಾಣಪತ್ರ ಹಾಗೂ ಅಂಗವಿಕಲೆ ಎಂದು ನಕಲಿ ದಾಖಲೆ ಸೃಷ್ಟಿಸಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಕುರಿತು ತನಿಖೆಗೆ ಏಕ ವ್ಯಕ್ತಿ ಸಮಿತಿಯನ್ನು ರಚಿಸಿ ಕೇಂದ್ರ ಸರ್ಕಾರ ಗುರುವಾರ ಆದೇಶಿಸಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅವರಿಗೆ ತನಿಖೆಯ ಹೊಣೆ ನೀಡಿದ್ದು, ಎರಡು ವಾರಗಳ ಒಳಗಾಗಿ ವರದಿ ಸಲ್ಲಿಸುವಂತೆ ಕೇಂದ್ರ ನಿರ್ದೇಶಿಸಿದೆ.
ಪ್ರೊಬೇಷನರಿ ಅಧಿಕಾರಿಯಾಗಿರುವ 34 ವರ್ಷದ ಪೂಜಾ ಅವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿರುವ ಹಾಗೂ ಹುದ್ದೆ ಗಿಟ್ಟಿಸಿಕೊಳ್ಳಲು ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪ ಹೊತ್ತಿದ್ದಾರೆ.
ತಮ್ಮ ಖಾಸಗಿ ಔಡಿ ಕಾರಿಗೆ ಬೀಕನ್ ಹಾಗೂ ಸರ್ಕಾರದ ಫಲಕ ಹಾಕಿಕೊಂಡು ಅವರು ಸುದ್ದಿಯಲ್ಲಿದ್ದರು. ಇದರಿಂದಾಗಿ ಪುಣೆಯಿಂದ ಅವರನ್ನು ವಾಶೀಂಗೆ ಸರ್ಕಾರ ವರ್ಗಾವಣೆ ಮಾಡಿತ್ತು.
ವಿದರ್ಭ ಪ್ರಾಂತ್ಯದ ವಾಶೀಂನ ಸಹಾಯಕ ಜಿಲ್ಲಾಧಿಕಾರಿಯಾಗಿ ಗುರುವಾರ ಬೆಳಿಗ್ಗೆ ಪೂಜಾ ಅಧಿಕಾರ ವಹಿಸಿಕೊಂಡಿದ್ದಾರೆ. ತಮ್ಮ ಮೇಲೆ ಕೇಳಿಬಂದಿರುವ ಆರೋಪ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.