ADVERTISEMENT

ಐಐಎಂನಂಥ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ

ಶಿಕ್ಷಣ ಗುಣಮಟ್ಟದಲ್ಲಿ ಬದಲಾವಣೆ ತರುವುದು ಕೇಂದ್ರದ ಉದ್ದೇಶ: ಪ್ರಧಾನಿ ಮೋದಿ ಆಶಯ

ಪಿಟಿಐ
Published 29 ಸೆಪ್ಟೆಂಬರ್ 2018, 19:46 IST
Last Updated 29 ಸೆಪ್ಟೆಂಬರ್ 2018, 19:46 IST
ನವದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಿಗೆ ಹಾಗೂ ಕುಲಪತಿಗಳಿಗೆ ಶುಭ ಕೋರಿದರು– ಪಿಟಿಐ ಚಿತ್ರ
ನವದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಿಗೆ ಹಾಗೂ ಕುಲಪತಿಗಳಿಗೆ ಶುಭ ಕೋರಿದರು– ಪಿಟಿಐ ಚಿತ್ರ   

ನವದೆಹಲಿ: ‘ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ (ಐಐಎಂ) ಸೇರಿದಂತೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲು ಚಿಂತನೆ ನಡೆದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ಶಿಕ್ಷಣದ ಪುನರುಜ್ಜೀವನಕ್ಕಾಗಿ ಶೈಕ್ಷಣಿಕ ನಾಯಕತ್ವ’ ಕುರಿತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಶನಿವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು ಹಾಗೂ ಕುಲಪತಿಗಳು ಸೇರಿದಂತೆ 350 ಮಂದಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ADVERTISEMENT

ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಉನ್ನತ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

‘ಪಠ್ಯಕ್ರಮ, ಶಿಕ್ಷಕರು ಮತ್ತು ಸದಸ್ಯರ ನೇಮಕಾತಿ ನಿರ್ಧರಿಸುವ ಅಧಿಕಾರವನ್ನು ಐಐಎಂ ಹೊಂದಿದೆ. ಇಂಥ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲಾಗುವುದು. ಈ ಸಂಸ್ಥೆಗಳ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಇದು ಭಾರತದ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಭೂತಪೂರ್ವ ನಿರ್ಧಾರ’ ಎಂದು ಪ್ರಧಾನಿ ಹೇಳಿದರು.

‘ಜೀವನವು ನಾವೀನ್ಯತೆಗಳಿಲ್ಲದೆ ಒಂದು ಹೊರೆಯಾಗಿ ಪರಿಣಮಿಸುತ್ತಿದೆ. ಆದ್ದರಿಂದಭಾರತೀಯ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಜ್ಞಾನ ಸಂಪಾದನೆ ಜೊತೆಗೆ ಹೊಸತನಕ್ಕೂ ಸಮಾನ ಒತ್ತು ನೀಡಬೇಕು. ದೇಶದಲ್ಲಿ ಆರೋಗ್ಯಕರ ಶಿಕ್ಷಣ ಇರಬೇಕು’ ಎಂದು ಆಶಿಸಿದರು.

‘ಜ್ಞಾನ ಮತ್ತು ಶಿಕ್ಷಣ ಕೇವಲ ಪುಸ್ತಕಕ್ಕೆ ಸೀಮಿತವಲ್ಲ. ಮನುಷ್ಯನ ಪ್ರತಿಯೊಂದು ಆಯಾಮದ ಸಮತೋಲಿತ ಬೆಳವಣಿಗೆಯನ್ನು ಸಕ್ರಿಯಗೊಳಿಸುವುದು ಶಿಕ್ಷಣದ ಉದ್ದೇಶ. ಆದರೆ, ಹೊಸತನ ಇಲ್ಲದೇ ಇದು ಸಾಧ್ಯವಿಲ್ಲ’ ಎಂದು ಮೋದಿ ಹೇಳಿದರು.

‘ನಾವು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ನೀಡುವ ಸಾಮರ್ಥ್ಯವನ್ನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಬೆಳೆಸಿಕೊಳ್ಳಬೇಕು. ಕಲಿಕೆಯನ್ನು ವಿದ್ಯಾರ್ಥಿಗಳು ದೇಶದ ಮಹತ್ವಾಕಾಂಕ್ಷೆಗಳಿಗೆ ವಿನಿಯೋಗಿಸಬೇಕು’ ಎಂದು ಸಲಹೆ ನೀಡಿದರು.

*
ರಾಷ್ಟ್ರದ ಅಗತ್ಯತೆಗಳಿಗೆ ಶೈಕ್ಷಣಿಕ ಸಂಸ್ಥೆಗಳು ಪ್ರತಿ ಹಂತದಲ್ಲೂ ಶ್ರಮಿಸಸಬೇಕು ಎಂಬುವುದು ಕೇಂದ್ರದ ಒತ್ತಾಸೆ.
-ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.