ADVERTISEMENT

ಕೇಂದ್ರ, ಗುಜರಾತ್ ಸರ್ಕಾರ ಬಿಲ್ಕಿಸ್‌ ಬಾನು ಬಳಿ ಕ್ಷಮೆಯಾಚಿಸಲಿ: ಒವೈಸಿ

ಪಿಟಿಐ
Published 8 ಜನವರಿ 2024, 9:42 IST
Last Updated 8 ಜನವರಿ 2024, 9:42 IST
ಅಸಾದುದ್ದೀನ್‌ ಒವೈಸಿ
ಅಸಾದುದ್ದೀನ್‌ ಒವೈಸಿ   

ಹೈದರಾಬಾದ್: ಕೇಂದ್ರ ಮತ್ತು ಗುಜರಾತ್‌ ಸರ್ಕಾರ ಬಿಲ್ಕಿಸ್‌ ಬಾನು ಅವರಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ ಒತ್ತಾಯಿಸಿದ್ದಾರೆ.

ಬಿಲ್ಕಿಸ್‌ ಬಾನು ಪ್ರಕರಣದ 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ ತೀರ್ಪಿನ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಉನ್ನತ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಅತ್ಯಾಚಾರಿಗಳಿಗೆ ಈ ತೀರ್ಪು ಭವಿಷ್ಯದಲ್ಲಿ ಎಚ್ಚರಿಕೆಯ ಗಂಟೆಯಾಗಲಿದೆ’ ಎಂದರು.

‘ಯಾರೊಬ್ಬರು ತಾವು ನಂಬಿರುವ ರಾಜಕೀಯ ಸಿದ್ದಾಂತದಿಂದಾಗಿ ಕಾನೂನಿನಿಂದ ಮುಕ್ತರಲ್ಲ ಎಂಬುವುದನ್ನು ಅತ್ಯಾಚಾರಿಗಳು ಅರ್ಥಮಾಡಿಕೊಳ್ಳುವುದು ಸೂಕ್ತ’ ಎಂದು ಹೇಳಿದರು.

ADVERTISEMENT

‘ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಈ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಇಡೀ ರಾಜ್ಯ ಕೋಮು ದಳ್ಳುರಿಯಲ್ಲಿ ಉರಿಯುತ್ತಿತ್ತು. ಪ್ರಕರಣದ ವಿಚಾರಣೆಯನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಗಿತ್ತು’ ಎಂದು ಹೇಳಿದರು.

‘ಸನ್ನಡತೆ ಮೇಲೆ 11 ಅಪರಾಧಿಗಳ ಬಿಡುಗಡೆಗೊಳಿಸಿದ್ದನ್ನು ಬಿಜೆಪಿ ಶಾಸಕರಿಬ್ಬರು ಸಮರ್ಥಿಸಿಕೊಂಡಿದ್ದಲ್ಲದೇ, ಒಬ್ಬ ಬಿಜೆಪಿ ಶಾಸಕ ಅಪರಾಧಿಗಳನ್ನು ‘ಸಂಸ್ಕಾರಿ’ ಎಂದು ಕರೆದಿದ್ದ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೇಂದ್ರ ಹಾಗೂ ಗುಜರಾತ್‌ನಲ್ಲಿರುವ ಬಿಜೆಪಿ ಸರ್ಕಾರಗಳ ಸಹಕಾರದಿಂದ ಅಪರಾಧಿಗಳು ಬಿಡುಗಡೆಗೊಂಡಿದ್ದರು. ಆದ್ದರಿಂದ ಕೇಂದ್ರ ಮತ್ತು ಗುಜರಾತ್‌ ಸರ್ಕಾರ ಬಿಲ್ಕಿಸ್‌ ಬಾನು ಅವರಲ್ಲಿ ಕ್ಷಮೆ ಕೇಳಬೇಕಿದೆ. ಇದೊಂದೆ ಅವರಿಗುಳಿದಿರುವ ದಾರಿ’ ಎಂದು ಹೇಳಿದರು.

‘ನರೇಂದ್ರ ಮೋದಿ ಅವರು ನಾರಿ ಶಕ್ತಿ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಾರೆ. ಅದೆಲ್ಲ ಪೊಳ್ಳು’ ಎಂದು ಕಿಡಿಕಾರಿದರು.

ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ಅವಕಾಶ ಕಲ್ಪಿಸಿದ್ದ ಗುಜರಾತ್‌ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಪಡಿಸಿದ್ದು, ಎರಡು ವಾರಗಳಲ್ಲಿ ಅಪರಾಧಿಗಳನ್ನು ಮರಳಿ ಜೈಲಿಗೆ ಕಳುಹಿಸುವಂತೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.