ನವದೆಹಲಿ: 2014–15 ಮತ್ತು 2020–21ರ ನಡುವೆ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇ 250ರಷ್ಟು ಹೆಚ್ಚಿಸಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಹೇಳಿದ್ದಾರೆ.
ಪ್ರತಿಪಕ್ಷಗಳು ಆಳ್ವಿಕೆ ನಡೆಸುವ ಹಲವು ರಾಜ್ಯಗಳಲ್ಲಿ ಇಂಧನ ದರ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗೆ ಪ್ರಿಯಾಂಕಾ ಅವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, 2014ರಲ್ಲಿ ಪೆಟ್ರೋಲ್ ಮೇಲೆ ಕೇವಲ ₹ 9.48 ಮತ್ತು ಡೀಸೆಲ್ ಮೇಲೆ ₹ 3.56 ಅಬಕಾರಿ ಸುಂಕ ವಿಧಿಸಲಾಗಿತ್ತು ಎಂದಿದ್ದಾರೆ.
ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಶೇ 250ರಷ್ಟು ಹೆಚ್ಚಿಸಿದೆ ಎಂಬ ಮಾಧ್ಯಮ ವರದಿಯನ್ನೂ ಪ್ರಿಯಾಂಕಾ ಅವರು ಟ್ವೀಟ್ ಜೊತೆ ಟ್ಯಾಗ್ ಮಾಡಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಕಡಿತದ ವಿಷಯವಾಗಿ ಬಿಜೆಪಿಯೇತರ ಪಕ್ಷಗಳ ಮುಖ್ಯಮಂತ್ರಿಗಳು ಕೂಡ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.