ADVERTISEMENT

ದೀಪಾವಳಿಗೆ ಕೇಂದ್ರದ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಶೇ 3ರಷ್ಟು ಹೆಚ್ಚಳ

ಪಿಟಿಐ
Published 16 ಅಕ್ಟೋಬರ್ 2024, 10:30 IST
Last Updated 16 ಅಕ್ಟೋಬರ್ 2024, 10:30 IST
ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್   

ನವದೆಹಲಿ: ದೀಪಾವಳಿ ಹಬ್ಬದ ಪ್ರಯುಕ್ತ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಸಿಹಿ ಸುದ್ದಿ ಕೊಟ್ಟಿದೆ. ಶೇ 3ರಷ್ಟು ತುಟ್ಟಿ ಭತ್ಯೆ(ಡಿಎ) ಹಾಗೂ ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು (ಡಿಆರ್‌) ಮೂಲ ವೇತನದ ಶೇ 3ರಷ್ಟು ಹೆಚ್ಚಳಕ್ಕೆ ಕೇಂದ್ರದ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಪ್ರಸ್ತುತ ಮೂಲ ವೇತನದ ಶೇ 50ರಷ್ಟು ಡಿಎ ಹಾಗೂ ಡಿಆರ್‌ ಇದೆ. ಇದು ಶೇ 53‌ಕ್ಕೆ ಏರಿಕೆಯಾಗಲಿದೆ. ಈ ವರ್ಷದ ಜುಲೈ 1ರಿಂದಲೇ ಇದು ಪೂರ್ವಾನ್ವಯವಾಗಲಿದೆ. ಇದಕ್ಕಾಗಿ ಕೇಂದ್ರಕ್ಕೆ ₹ 9,448 ಕೋಟಿ ಹೊರೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಉದಾಹರಣೆಗೆ ಮಾಸಿಕ ₹40,000 ಮೂಲ ವೇತನ ಪಡೆಯುತ್ತಿರುವ ನೌಕರನಿಗೆ ಶೇ 3ರಷ್ಟು ತುಟ್ಟಿ ಭತ್ಯೆ ಹೆಚ್ಚಳದಿಂದ ಮಾಸಿಕ ₹1,200 ಹೆಚ್ಚುವರಿಯಾಗಿ ಸಿಗಲಿದೆ. ಈ ಮೂಲಕ ಒಟ್ಟು ತುಟ್ಟಿ ಭತ್ಯೆ ₹20,000ದಿಂದ ₹21,200ಕ್ಕೆ ಹೆಚ್ಚಳವಾಗಲಿದೆ. ಪಿಂಚಣಿದಾರರಿಗೂ ಇದರ ಅನುಕೂಲ ಸಿಗಲಿದೆ.

ADVERTISEMENT

ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ನೌಕರರನ್ನು ಬೆಂಬಲಿಸಲು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ (ಎಐಸಿಪಿಐ) ಆಧಾರದ ಮೇಲೆ ತುಟ್ಟಿ ಭತ್ಯೆ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಶೇ 4ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಿತ್ತು.

ಪ್ರಸ್ತುತ 49.18 ಲಕ್ಷ ನೌಕರರು ಮತ್ತು 64.89 ಲಕ್ಷ ಪಿಂಚಣಿದಾರರು ಇದ್ದಾರೆ.

ತುಟ್ಟಿ ಭತ್ಯೆ ಎಂದರೇನು?
ತುಟ್ಟಿಭತ್ಯೆ ಎನ್ನುವುದು ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಪಾವತಿಸುವ ಜೀವನ ವೆಚ್ಚದ ಹೊಂದಾಣಿಕೆಯ ಮೊತ್ತವಾಗಿದೆ. ಏರುತ್ತಿರುವ ಬೆಲೆಗಳಿಗೆ ಅನುಗುಣವಾಗಿ ಸಂಬಳ ಮತ್ತು ಪಿಂಚಣಿಗಳನ್ನು ಸರಿಹೊಂದಿಸುವ ಮೂಲಕ ಹಣದುಬ್ಬರದ ಪ್ರಭಾವವನ್ನು ತಗ್ಗಿಸಲು ಸಹಾಯ ಮಾಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಎಐಸಿಪಿಐನಿಂದ ಅಳೆಯಲಾದ ಹಣದುಬ್ಬರ ದರವನ್ನು ಆಧರಿಸಿ ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.