ADVERTISEMENT

ನವದೆಹಲಿ: ಅಧಿಕಾರಿಗಳ ವರ್ಗ, ನಿಯೋಜನೆ ಪ್ರಾಧಿಕಾರ ರಚಿಸಿ ಕೇಂದ್ರದ ಸುಗ್ರೀವಾಜ್ಞೆ

​ಪ್ರಜಾವಾಣಿ ವಾರ್ತೆ
Published 19 ಮೇ 2023, 20:56 IST
Last Updated 19 ಮೇ 2023, 20:56 IST

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ಗ್ರೂಪ್‌ ಎ ಅಧಿಕಾರಿಗಳ ವರ್ಗಾವಣೆ, ನಿಯೋಜನೆ ಪ್ರಕ್ರಿಯೆ ಉಸ್ತುವಾರಿಗಾಗಿ ‘ರಾಷ್ಟ್ರ ರಾಜಧಾನಿ ನಾಗರಿ ಸೇವಾ ಪ್ರಾಧಿಕಾರ’ವನ್ನು ಕೇಂದ್ರ ಸರ್ಕಾರ ರಚಿಸಿದೆ. ಈ ಸಂಬಂಧ ಶುಕ್ರವಾರ ಸುಗ್ರೀವಾಜ್ಞೆ ಹೊರಡಿಸಿದೆ.

ದಾದ್ರಾ ಮತ್ತು ನಗರ್ ಹವೇಲಿ (ನಾಗರಿಕ) ಸೇವೆ ಕೇಡರ್‌ನ (ಡಿಎಎನ್‌ಐಸಿಎಸ್) ಅಧಿಕಾರಿಗಳ ವಿರುದ್ಧದ ಶಿಸ್ತುಕ್ರಮ ಪ್ರಕ್ರಿಯೆಗಳು ಕೂಡಾ ಈ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿದೆ ಎಂದು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿದೆ.

ನವದೆಹಲಿಯಲ್ಲಿ ಸೇವಾ ವಲಯದ ಮೇಲಿನ ಅಧಿಕಾರವನ್ನು ದೆಹಲಿ ಸರ್ಕಾರದ ಸುಪರ್ದಿಗೆ ಒಪ್ಪಿಸುವ ಸುಪ್ರೀಂ ಕೋರ್ಟ್‌ನ ಆದೇಶ ಹೊರಬಿದ್ದ ಒಂದು ವಾರದ ನಂತರ ಪ್ರಾಧಿಕಾರವನ್ನು ರಚಿಸುವ ಸಂಬಂಧ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದೆ.

ADVERTISEMENT

ದೆಹಲಿ ಸರ್ಕಾರದ ಮುಖ್ಯಮಂತ್ರಿ ಅವರು ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಮುಖ್ಯ ಕಾರ್ಯದರ್ಶಿ, ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅವರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ ಎಂದು ತಿಳಿಸಲಾಗಿದೆ.

ಪ್ರಾಧಿಕಾರ ಸಭೆಯಲ್ಲಿ ಹಾಜರಿರುವ ಸದಸ್ಯರು ಮತ ಚಲಾಯಿಸುವ ಮೂಲಕ, ಬಹುಮತದ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಪ್ರಾಧಿಕಾರದ ಎಲ್ಲ ಶಿಫಾರಸುಗಳನ್ನು ಸದಸ್ಯ ಕಾರ್ಯದರ್ಶಿ ಅವರು ದೃಢೀಕರಿಸಬೇಕು ಎಂದು ಸೂಚಿಸಲಾಗಿದೆ.

ಅಗತ್ಯಾನುಸಾರ ಅಧ್ಯಕ್ಷರ ಅನುಮೋದನೆ ಆಧರಿಸಿ ಪ್ರಾಧಿಕಾರದ ಸಭೆ ಕರೆಯಬೇಕು. ಪ್ರಾಧಿಕಾರದ ಜೊತೆಗೆ ಚರ್ಚಿಸಿ ಕೇಂದ್ರ ಸರ್ಕಾರವು ಪ್ರಾಧಿಕಾರಕ್ಕೆ ನೆರವು ನೀಡಬಹುದಾದ ವಿವಿಧ ವರ್ಗಗಳ ಅಧಿಕಾರಿಗಳು, ಸಿಬ್ಬಂದಿ ಅಗತ್ಯವನ್ನು ನಿರ್ಧರಿಸಬಹುದು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.